ಉದಯವಾಹಿನಿ, ಪಶ್ಚಿಮ ಬಂಗಾಲ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಕಳುಹಿಸಲಾದ ನೊಟೀಸ್ ಗೆ ಉತ್ತರ ಸಿಗದ ಕಾರಣ ಅಲಿಪೋರ್ ನ್ಯಾಯಾಲಯದ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿರುವುದಾಗಿ ಅವರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ, ಬಿಜೆಪಿ ಶಾಸಕ ಸುವೇಂದು ಅಧಿಕಾರಿ, ಮಮತಾ ಬ್ಯಾನರ್ಜಿಯವರೇ ನೀವು ಸಮಸ್ಯೆಗಳ ಬಗ್ಗೆ ಜನರನ್ನುಗೊಂದಲಗೊಳಿಸುತ್ತಿರುವಾಗ ನಾನು ನನ್ನ ಬದ್ಧತೆಯನ್ನು ತೋರಬೇಕಿದೆ. ಕಲ್ಲಿದ್ದಲು ಹಗರಣದಲ್ಲಿ ನಾನು ಭಾಗಿಯಾಗಿದ್ದೇನೆ ಎಂಬುದು ನಿಮ್ಮ ಕಾಲ್ಪನಿಕ ಆರೋಪ. ಇದಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಕಳುಹಿಸಿರುವ ಮಾನನಷ್ಟ ನೊಟೀಸ್ ಗೆ ನಿಮ್ಮ ಮೌನವು ಈ ಪರಿಸ್ಥಿತಿಯಲ್ಲಿ ನಿಮಗ ಸಹಾಯ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ನೀವು ಮಾಡಿರುವ ವಂಚನೆಯ ದುಸ್ಸಾಹಸಕ್ಕಾಗಿ ನಿಮ್ಮನ್ನು ನ್ಯಾಯಾಲಯಕ್ಕೆ ಕರೆಯುವುದಾಗಿ ನಾನು ಹೇಳಿದ್ದು, ಆ ಮಾತನ್ನು ಈಗ ಉಳಿಸಿಕೊಂಡಿದ್ದೇನೆ. ನಿಮ್ಮ ವಿರುದ್ಧ ಮೊಕದ್ದಮೆ ಹೂಡಿದ್ದೇನೆ ಎಂದು ಹೇಳಿರುವ ಅಧಿಕಾರಿ, ಅವರು ಸಲ್ಲಿಸಿದ ಹಕ್ಕು ಮೊಕದ್ದಮೆಯ ನೊಟೀಸ್ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
