ಉದಯವಾಹಿನಿ, ಮುಂಬೈ: ಮಹಾರಾಷ್ಟ್ರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಮುಸ್ಲಿಮರು ಪ್ರಾಬಲ್ಯ ಹೊಂದಿರುವ ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನಲ್ಲಿ ಇಸ್ಲಾಂ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಮೇಯರ್‌ ಪಟ್ಟ ಅಲಂಕರಿಸಲಿದೆ.
ಪಕ್ಷವನ್ನು ಸಂಕ್ಷಿಪ್ತವಾಗಿ ಇಸ್ಲಾಂ ಪಕ್ಷ ಎಂದು ಕರೆಯಲಾಗುತ್ತದೆ. ಒಟ್ಟು 84 ಸ್ಥಾನಗಳಲ್ಲಿ ಇಸ್ಲಾಂ ಪಕ್ಷ 35 ಸ್ಥಾನಗಳನ್ನು ಗೆದ್ದಿದ್ದರೆ, ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ 21 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 18 ಸ್ಥಾನಗಳನ್ನು ಪಡೆದಿದ್ದು, ಸಮಾಜವಾದಿ ಪಕ್ಷ 5, ಕಾಂಗ್ರೆಸ್‌ 3, ಬಿಜೆಪಿ ಕೇವಲ 2 ಸ್ಥಾನಗಳನ್ನು ಗೆದ್ದಿದೆ.
ಇಸ್ಲಾಂ ಪಕ್ಷದ ಮುಖ್ಯಸ್ಥ ಶೇಖ್ ಆಸಿಫ್ ಶೇಖ್ ರಶೀದ್ ಮಾತನಾಡಿ, ಜನರು ನಮಗೆ ಜನಾದೇಶ ನೀಡಿದ್ದಾರೆ. ನಗರದ ಅಭಿವೃದ್ಧಿ, ಪ್ರಗತಿ ಮತ್ತು ಏಕತೆಯನ್ನು ಕಾಪಾಡಿಕೊಳ್ಳಲು ನಾವು ಸಮಾನ ಮನಸ್ಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ. ಪಕ್ಷಗಳು ನಮ್ಮನ್ನು ಬೆಂಬಲಿಸಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
2014ರ ವಿಧಾನಸಭಾ ಚುನಾವಣೆಯಲ್ಲಿ ರಶೀದ್ ಕಾಂಗ್ರೆಸ್‌ನಿಂದ ಮಾಲೆಗಾಂವ್ ಸೆಂಟ್ರಲ್ ಸ್ಥಾನವನ್ನು ಗೆದ್ದಿದ್ದರು. 2019 ರಲ್ಲಿ ಅವರು AIMIM ಅಭ್ಯರ್ಥಿ ಮುಫ್ತಿ ಇಸ್ಮಾಯಿಲ್ ವಿರುದ್ಧ ಸೋತಿದ್ದರು. 2022 ರಲ್ಲಿ ಆಸಿಫ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಶರದ್ ಪವಾರ್ ಅವರ ಎನ್‌ಸಿಪಿ ಸೇರಿದ್ದರು. ಎನ್‌ಸಿಪಿ ವಿಭಜನೆಯ ನಂತರ ಅವರು ಪಕ್ಷವನ್ನು ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
2017ರ ಮಾಲೆಗಾಂವ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಕಾಂಗ್ರೆಸ್ 28 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಎನ್‌ಸಿಪಿ 20, ಶಿವಸೇನೆ 13, ಬಿಜೆಪಿ 9, AIMIM 7 ಮಂದಿ ಜೊತೆ 7 ಜನ ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದರು.

Leave a Reply

Your email address will not be published. Required fields are marked *

error: Content is protected !!