ಉದಯವಾಹಿನಿ, ಶಿಡ್ಲಘಟ್ಟ: ಶಿಡ್ಲಘಟ್ಟದಲ್ಲಿ ಬೇಸಿಗೆಯ ಮೊದಲ ಮಳೆಯ ಹನಿಗಳ ಸಿಂಚನವಾಯಿತು. ನಗರ ಸೇರಿದಂತೆ ತಾಲ್ಲೂಕಿನ ಹಲವು ಕಡೆ ಮಳೆ ಬಿತ್ತು. ಎರಡು ಮೂರು ದಿನಗಳಿಂದಲೂ ಮೋಡ ಕವಿದ ವಾತಾವರಣ ಇತ್ತಾದರೂ ಬಿಸಿಲ ಧಗೆಯೂ ಹೆಚ್ಚಿತ್ತು. ಮಳೆ ಬೀಳಬಹುದಾದ ವಾತಾವರಣ ನಿರ್ಮಾಣವಾಗಿದ್ದು ಶನಿವಾರ ಸಂಜೆ ತಾಲ್ಲೂಕಿನ ಬಹುತೇಕ ಕಡೆ ಮಳೆ ಹನಿಗಳು ಭೂಮಿಗೆ ಬಿದ್ದಿವೆ.
ಕೆಲವೊಂದು ಕಡೆ ಬಿರುಸಿನ ಮಳೆಯಾಗಿದ್ದರೆ ಇನ್ನೊಂದಷ್ಟು ಕಡೆ ಸುಮ್ಮನೆ ಭೂಮಿ ಮೇಲಿನ ಧೂಳು ತೇವವಾಗುವಷ್ಟು ಮಾತ್ರವೇ ಮಳೆ ಬಿದ್ದಿದೆ. ಇದರಿಂದ ಮಳೆ ಹನಿಗಳು ಬಿದ್ದ ಸಂತಸ ಒಂದು ಕಡೆಯಾದರೂ ಸಾಕು ಸಾಕಾಗದ ಮಳೆಯಿಂದ ಇನ್ನಷ್ಟು ಧಗೆ ಹೆಚ್ಚುವ ಆತಂಕವೂ ಬೋದಗೂರು ಗ್ರಾಮದಲ್ಲಿ ಬಚ್ಚಮ್ಮ ಎನ್ನುವವರಿಗೆ ಸೇರಿದ ರೇಷ್ಮೆ ಹುಳು ಸಾಕಣೆ ಮನೆಯ ಚಾವಣಿಯ ತಗಡಿನ ಶೀಟುಗಳು ಹಾರಿ ಹೋಗಿವೆ. ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಒಂದು ಮರ ಬುಡ ಸಮೇತ ಉರುಳಿ ರಸ್ತೆಗೆ ಬಿದ್ದಿದೆ. ಕೆಲವೊಂದು ಕಡೆ ಬಿರುಗಾಳಿ ಸಮೇತ ಸಣ್ಣ ಪ್ರಮಾಣದ ಮಳೆ ಬಿದ್ದಿದ್ದು ಬೆಳೆ ಹಾನಿ, ಮನೆ ಚಾವಣೆ ಹಾರಿದ್ದು, ಮರಗಳು ಉರುಳಿ ಬಿದ್ದ ಘಟನೆಗಳು ನಡೆದಿದೆ.
