ಉದಯವಾಹಿನಿ, ಇಟಾನಗರ: ಮಲಪ್ಪುರಂಗೆ ತೆರಳುತ್ತಿದ್ದ ಇಬ್ಬರು ಕೇರಳ ಯುವಕರು ಅರುಣಾಚಲದ ಹೆಪ್ಪುಗಟ್ಟಿದ ಸೆಲಾ ಸರೋವರದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಹೆಪ್ಪುಗಟ್ಟಿದ ಸೆಲಾ ಸರೋವರದಲ್ಲಿ ಶುಕ್ರವಾರ ಏಳು ಸದಸ್ಯರ ಪ್ರವಾಸಿ ಗುಂಪಿನಲ್ಲಿದ್ದ ಇಬ್ಬರು ಕೇರಳದ ಯುವಕರು ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಕೊಲ್ಲಂನ 24 ವರ್ಷದ ಬಿನು ಪ್ರಕಾಶ್ ಮತ್ತು ಮಲಪ್ಪುರಂ ನಿವಾಸಿ 26 ವರ್ಷದ ಮಾಧವ್ ಜಿ ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಬಿನು ಅವರ ಮೃತದೇಹ ಪತ್ತೆಯಾಗಿದೆ. ಗಂಟೆಗಳ ಕಾಲ ಹುಡುಕಾಟದ ನಂತರ ಶನಿವಾರ ಬೆಳಿಗ್ಗೆ ಅಧಿಕಾರಿಗಳು ಮಾಧವ್ ಅವರ ಮೃತದೇಹವನ್ನು ಪತ್ತೆ ಮಾಡಿದ್ದಾರೆ.
ತವಾಂಗ್ ಜಿಲ್ಲಾಡಳಿತದ ಅಧಿಕಾರಿ ಮ್ಯಾಥ್ಯೂ ಫಿಲಿಪ್ ಮಾತನಾಡಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಂಗ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲಾಧಿಕಾರಿಗಳು ಮೃತದೇಹಗಳನ್ನು ಗುವಾಹಟಿಗೆ ಸಾಗಿಸಲು ನಿರ್ದೇಶಿಸಿದ್ದಾರೆ. ಅಲ್ಲಿಂದ ವಿಮಾನದ ಮೂಲಕ ಕೇರಳಕ್ಕೆ ಶವಗಳನ್ನು ಸಾಗಿಸಲಾಗುವುದು ಎಂದು ತಿಳಿಸಿದ್ದಾರೆ.
ಸರೋವರವು ಹೆಪ್ಪುಗಟ್ಟಿತ್ತು. ಮೃತ ಇಬ್ಬರಲ್ಲಿ ಒಬ್ಬರು ಹೆಪ್ಪುಗಟ್ಟಿದ ನೀರಿನ ಮೇಲೆ ಫೋನ್‌ನಲ್ಲಿ ಮಾತನಾಡುತ್ತಾ ನಡೆದರು. ಮಂಜುಗಡ್ಡೆ ಬಿರುಕು ಬಿಟ್ಟಿತು. ಬಿರುಕಿನ ಮೂಲಕ ನೀರಿಗೆ ಜಾರಿ ಬಿದ್ದರು. ಅವರನ್ನು ರಕ್ಷಿಸಲು ಇತರ ಐದು ಮಂದಿ ನೀರಿಗೆ ಜಿಗಿದರು. ಅವರಲ್ಲಿ ಇಬ್ಬರು ನಾಪತ್ತೆಯಾದರೆ, ಉಳಿದ ಮೂವರನ್ನು ರಕ್ಷಿಸಲಾಯಿತು. ಶವಗಳನ್ನು ನಂತರ ಹೊರತೆಗೆಯಲಾಯಿತು.
ತೀವ್ರ ಹವಾಮಾನ ಪರಿಸ್ಥಿತಿಯಿಂದಾಗಿ ಶೋಧ ಕಾರ್ಯಾಚರಣೆ ಅತ್ಯಂತ ಕಷ್ಟಕರವಾಗಿತ್ತು. ಆರಂಭದಲ್ಲಿ ದೋಣಿ ಬಳಸಿ ಹುಡುಕಾಟ ನಡೆಸಲಾಗಿತ್ತು. ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ನೀರಿನ ಮೇಲೆ ಎಸೆದ ಕೊಕ್ಕೆಗೆ ಬಟ್ಟೆಯೊಂದು ಸಿಲುಕಿತು. ಆಗ ಮಾಧವ್ ಅವರ ದೇಹವನ್ನು ಹೊರತೆಗೆಯಲಾಯಿತು. ಯುವಕರು ತವಾಂಗ್‌ಗೆ ತೆರಳುತ್ತಿದ್ದಾಗ ಸರೋವರದ ಬಳಿ ಫೋಟೊಗಳನ್ನು ತೆಗೆದುಕೊಳ್ಳಲು ಬಂದಿದ್ದರು. ಗುಂಪಿನ ಇತರ ಸದಸ್ಯರನ್ನು ಸೇನಾ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
