ಉದಯವಾಹಿನಿ, ಪಟನಾ: 13 ವರ್ಷದ ಬಾಲಕನಿಗೆ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ. ಭೀಕರ ರಸ್ತೆ ಅಪಘಾತದಲ್ಲಿ ಬಾಲಕ ಶವವಾಗಿ ಬಿದ್ದಿದ್ದರೆ, ಮಾನವೀಯತೆ ಮರೆತ ಜನರು ಮೀನು ಹಿಡಿಯುವಲ್ಲಿ ಬ್ಯುಸಿಯಾಗಿದ್ದಾರೆ. ಪುಪ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಝಾಜಿಹಾತ್ ಗ್ರಾಮದ ಬಳಿ ಈ ಅಮಾನವೀಯ ಘಟನೆ ನಡೆದಿದೆ.
ಗೋಲು ಎಂದೂ ಕರೆಯಲ್ಪಡುವ ಏಳನೇ ತರಗತಿಯ ವಿದ್ಯಾರ್ಥಿ ರಿತೇಶ್ ಕುಮಾರ್ ಮೃತ ಬಾಲಕ. ಬೆಳಗ್ಗೆ ಶಾಲೆಗೆ ಹೋಗುತ್ತಿದ್ದಾಗ ವೇಗವಾಗಿ ಬಂದ ಪಿಕಪ್ ಟ್ರಕ್ ಡಿಕ್ಕಿ ಹೊಡೆದಿದೆ. ಸಂತೋಷ್ ದಾಸ್ ಎಂಬುವವರ ಮಗನಾಗಿರುವ ರಿತೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಡಿಕ್ಕಿಯ ತೀವ್ರತೆ ಎಷ್ಟು ತೀವ್ರವಾಗಿತ್ತು ಎಂದರೆ ಹತ್ತಿರದಲ್ಲಿದ್ದವರು ಜೋರಾಗಿ ಕಿರುಚಿದ್ದಾರೆ. ಪುತ್ರನ ಸಾವಿನಿಂದ ವಿದ್ಯಾರ್ಥಿಯ ಪೋಷಕರು ದುಃಖದಲ್ಲಿ ಮುಳುಗಿದ್ದರೆ, ರಸ್ತೆಯ ಇನ್ನೊಂದು ಬದಿಯಲ್ಲಿನ ದೃಶ್ಯವು ತುಂಬಾ ವಿಭಿನ್ನವಾಗಿತ್ತು. ಮಾರಕ ಅಪಘಾತಕ್ಕೆ ಕಾರಣವಾದ ಪಿಕಪ್ ಟ್ರಕ್ ಮೀನುಗಳಿಂದ ತುಂಬಿತ್ತು. ಅಪಘಾತದಿಂದಾಗಿ ಅದು ರಸ್ತೆಯಾದ್ಯಂತ ಹರಡಿಕೊಂಡಿತ್ತು.
ಸ್ಥಳದಲ್ಲಿ ಜಮಾಯಿಸಿದ ಅನೇಕ ಜನರು ಸಹಾಯ ಮಾಡಲೇ ಇಲ್ಲ. ಆಂಬ್ಯುಲೆನ್ಸ್‌ಗೂ ಕರೆ ಮಾಡಲಿಲ್ಲ, ಪೊಲೀಸರನ್ನು ಸಹ ಸಂಪರ್ಕಿಸಲಿಲ್ಲ. ಬದಲಾಗಿ ಮೀನುಗಳನ್ನು ಲೂಟಿ ಮಾಡಲು ಪ್ರಾರಂಭಿಸಿದರು. ಬಾಲಕನ ಶವ ರಕ್ತದ ಮಡುವಿನಲ್ಲಿ ಹತ್ತಿರದಲ್ಲಿ ಬಿದ್ದಿದ್ದರೆ, ಜನರು ಅದನ್ನು ಲೆಕ್ಕಿಸದೆ ಚೀಲಗಳಲ್ಲಿ ಮೀನುಗಳನ್ನು ತುಂಬಲು ತಾಮುಂದು, ನಾಮುಂದು ಎನ್ನುತ್ತಾ ದೌಡಾಯಿಸಿದ್ದಾರೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ಪುಪ್ರಿ ಪೊಲೀಸ್ ಠಾಣೆಯ ಅಧಿಕಾರಿಗಳು, ಸ್ಥಳಕ್ಕೆ ಧಾವಿಸಿ ಗುಂಪನ್ನು ಚದುರಿಸಿದರು. ರಿತೇಶ್‍ನ ದೇಹವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಅಪಘಾತಕ್ಕೆ ಕಾರಣವಾದ ಪಿಕಪ್ ಟ್ರಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ತನಿಖೆಯನ್ನು ಪ್ರಾರಂಭಿಸಿದ್ದಾರೆ. ರಾಜಸ್ಥಾನದ ಫತೇಪುರ್ ಶೇಖಾವತಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವು ಇಡೀ ಪ್ರದೇಶವನ್ನು ತೀವ್ರ ದುಃಖದಲ್ಲಿ ಮುಳುಗಿಸಿತು. ರಘುನಾಥಪುರ ಗ್ರಾಮದ ಒಂದೇ ಕುಟುಂಬದ ಏಳು ಮಹಿಳೆಯರು ದುರ್ಮರಣಕ್ಕೀಡಾದರು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ನಂತರ ಕುಟುಂಬವು ಲಕ್ಷ್ಮಣಗಢದಿಂದ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
