ಉದಯವಾಹಿನಿ, ಸಕಲೇಶಪುರ: ಹೆಬ್ಬನಹಳ್ಳಿ ಗ್ರಾಮದಲ್ಲಿ ಮಖ್ಯಾ ಕಾಡಾನೆಯನ್ನು ಭಾನುವಾರ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಬಾಗೆ ಸಮೀಪದ ಕಾಕನಮನೆ ಗ್ರಾಮದ ರುಹಿಯಾ ಎಸ್ಟೇಟ್‌ನಲ್ಲಿ ಕಾಣಿಸಿಕೊಂಡಿದ್ದ ಮಖ್ಯಾ ಕಾಡಾನೆ, ಭಾನುವಾರ ಬೆಳಿಗ್ಗೆ ಉದೇವಾರ ಸಮೀಪದ ಹೆಬ್ಬನಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಪತ್ತೆ ಆಗಿತ್ತು.
ನಾಗರಹೊಳೆ ವನ್ಯಜೀವಿ ವಿಭಾಗದ ವೈದ್ಯ ಡಾ. ರಮೇಶ್ ಹಾಗೂ ಬಂಡೀಪುರದ ಡಾ. ಅಕ್ರಮ್ ಪಾಷಾ ನಿರ್ದೇಶನದಂತೆ ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ಹಾಕುವಲ್ಲಿ ಯಶಸ್ವಿಯಾದರು. ಕುಮ್ಮಿ ಆನೆಗಳು ಮಖ್ಯಾ ಆನೆಯನ್ನು ಬಂಧಿಸುವಾಗ ಹೋರಾಟವೇ ನಡೆಯಿತು. ಅರಿವಳಿಕೆಯ ನಂತರ ಸುಸ್ತಾದ ಮಖ್ಯಾ ಆನೆಯ ಕಾಲುಗಳಿಗೆ ಹಗ್ಗ ಕಟ್ಟಲಾಗಿತ್ತು. ಎಚ್ಚರ ಬರುತ್ತಿದ್ದಂತೆಯೇ ಮಖ್ಯಾ ಆನೆ, ಸಾಕಾನೆಗಳ ಜೊತೆಗೆ ಕಾದಾಟಕ್ಕೆ ಅಣಿಯಾಯಿತು. ಮಾವುತರ ಸಾಕಾನೆಗಳ ಸಹಾಯದಿಂದ ಮಖ್ಯಾ ಆನೆಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾದರು.
ನಂತರ ಸಾಕಾನೆಗಳ ಸಹಾಯದಿಂದ ಮಖ್ಯಾ ಆನೆಯನ್ನು ಲಾರಿ ಇರುವ ಸ್ಥಳಕ್ಕೆ ಕರೆತರಲಾಯಿತು. ಕ್ರೇನ್ ಮೂಲಕ ಆನೆಯನ್ನು ಲಾರಿಗೆ ಹತ್ತಿಸಲಾಯಿತು. ಸೆರೆ ಹಿಡಿದ ಆನೆಯನ್ನು ಸಕ್ರೆಬೈಲ್ ಆನೆ ಧಾಮಕ್ಕೆ ಕಳುಹಿಸಲಾಯಿತು.
