ಉದಯವಾಹಿನಿ, ಕುಷ್ಟಗಿ: ಪಟ್ಟಣದ ಮದ್ಯಾನೇಶ್ವರ ಮಠದಲ್ಲಿ ಭಾನುವಾರ ಲಿಂ.ಕರಿಬಸವ
ಶಿವಾಚಾರ್ಯರ 51ನೇ ಪುಣ್ಯಾರಾಧನೆ ಹಾಗೂ ಕರಿಬಸವ ಸ್ವಾಮೀಜಿಯವರ ಪಟ್ಟಾಧಿಕಾರದ 24ನೇ ವಾರ್ಷಿಕ ಮಹೋತ್ಸವ ಶ್ರದ್ಧೆ. ಭಕ್ತಿಯೊಂದಿಗೆ ನೆರವೇರಿತು.
ಕರಿಬಸವ ಸ್ವಾಮೀಜಿ ನೇತೃತ್ವದಲ್ಲಿ ಕತೃಗದ್ದುಗೆಗೆ ಮಹಾರುದ್ರಾಭಿಷೇಕ,
ವಿಶೇಷ ಪೂಜೆ, ಪಂಚಾಚಾರ್ಯ ಧ್ವಜಾರೋಹಣ, 108 ಮಹಿಳೆಯರಿಗೆ ಉಡಿ ತುಂಬುವ, ಇಷ್ಟಲಿಂಗಧಾರಣ, ವಟುಗಳಿಗೆ ಅಯ್ಯಾಚಾರ, ಲಿಂಗದೀಕ್ಷೆ, ಇತರೆ ಸಾಂಪ್ರದಾಯಕ, ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗಜದಂಡ ಸ್ವಾಮೀಜಿ ಅವರು ಕುಳಿತಿದ್ದ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತು.
ಕುಂಭ-ಕಳಸ ಹಿಡಿದ ಅಕ್ಕನ ಬಳಗದ ನೂರಾರು ಮಹಿಳೆಯರು, ಮಹಿಳಾ
ಡೊಳ್ಳು ಕಲಾವಿದರು, ಕುದುರೆ ಕುಣಿತ, ಇತರೆ ಜಾನಪದ ಶೈಲಿಯ ಕಲಾತಂಡಗಳು ಮೆರವಣಿಗೆಯಲ್ಲಿದ್ದವು. ಸಂಜೆ ಮಹಾರಥೋತ್ಸವ, ಧರ್ಮಸಭೆ ನಡೆಯಿತು.
ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿದ್ದ ಮದ್ಯಾನೇಶ್ವರ ಮಠದ ಕರಿಬಸವ ಸ್ವಾಮೀಜಿ ಹಾಗೂ ವೀರಸಂಗಮೇಶ್ವರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ, ಅಡವಿಸಿದ್ದೇಶ್ವರ ಮಠದ ಗಂಗಾಧರ
ಸ್ವಾಮೀಜಿ, ಮಹಾದೇವ ಸ್ವಾಮೀಜಿ, ಚಂದ್ರಶೇಖರ ದೇವರು, ನೀಲಕಂಠಯ್ಯ ತಾತ, ಇತರೆ ಮಠಾಧೀಶರು ಸಾನಿಧ್ಯ ವಹಿಸಿದ್ದರು.
ಪಟ್ಟಣದ ಪ್ರಮುಖರು, ವಿವಿಧ ಸಮುದಾಯಗಳ ಮುಖಂಡರು ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
