ಉದಯವಾಹಿನಿ, ಬೆಂಗಳೂರು: ಮನಿ ಸಂಜೆ ಹನಿ ಸರ್ಕಾರವಾಗಿದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನಿಟ್ರಾಪ್ ಯತ್ನ ಆಗಿದೆ ಎಂದು ಸದನದಲ್ಲಿ ವಿಷಯ ಪ್ರಸ್ತಾಪಿಸಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಏಕೆ ನಾಲೈದು ದಿನಗಳಿಂದ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಒಂದು ಕುರ್ಚಿಗೋಸ್ಕರ ಈ ಮಟ್ಟದ ರಾಜಕಾರಣ ನಡೆಯುತ್ತಿದೆ. ಸಿಡಿ ಫ್ಯಾಕ್ಟರಿ ಮಾಲೀಕ ಯಾರು?, ಆ ಮಹನೀಯ ಯಾರು? ಎಂಬುದನ್ನು ಹೊರಗಡೆ ತನ್ನಿ. ನಾವು ಆ ಪುಣ್ಯಾತ್ಮನನ್ನು ನೋಡಲು ಕಾತರದಿಂದ ಕಾಯುತ್ತಿದ್ದೇವೆ. ದೂರು ಕೊಡಿ ಎಂದು ಸಚಿವ ರಾಜಣ್ಣ ಅವರನ್ನು ಆಗ್ರಹಿಸಿದರು.
ವಿಧಾನಸೌಧ ದೇವಾಲಯವಿದ್ದಂತೆ. ಅಲ್ಲಿ ವಿಷಯಾಧಾರಿತ ಚರ್ಚೆಗಳಾಗಬೇಕು. ನಮ್ಮಂತಹ ಯುವಕರಿಗೆ ಮಾರ್ಗದರ್ಶನವಾಗುವ ಚರ್ಚೆಯಾಗಬೇಕು. ಆದರೆ ಹನಿಟ್ರಾಪ್ ವಿಚಾರ ಪ್ರಸ್ತಾಪವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸೌಹಾರ್ದಯುತವಾಗಿ ಬಗೆಹರಿಸಿ : ಮೇಕೆದಾಟು ಯೋಜನೆಗೆ ತಕರಾರು ತೆಗೆದಿರುವ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮುಂದಡಿ ಇಡಬೇಕು. ಈ ನಿಟ್ಟಿನಲ್ಲಿ ವೇದಿಕೆ ಸಿದ್ಧಪಡಿಸಬೇಕು. ನಾವು ನೆಲ, ಜಲ, ಭಾಷೆ ವಿಚಾರದಲ್ಲಿ ಎಲ್ಲದಕ್ಕೂ ಸಿದ್ಧವಿದ್ದೇವೆ. ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಗುತ್ತಿಗೆ ಕಾಮಗಾರಿಗಳಲ್ಲಿ ಒಂದು ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿ ಓಲೈಕೆ ರಾಜಕಾರಣ ಮಾಡುವುದನ್ನು ಸರ್ಕಾರ ಬಿಟ್ಟು ಹಿಂದುಳಿದಿರುವ ಎಲ್ಲಾ ಸಮುದಾಯಗಳಿಗೂ ಕಾರ್ಯಕ್ರಮ ರೂಪಿಸಬೇಕು ಎಂದು ಅವರು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!