ಉದಯವಾಹಿನಿ, ನವದೆಹಲಿ: ಏಪ್ರಿಲ್ 1 ರಿಂದ ಅನ್ವಯವಾಗುವಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ಶೇ.3 ರಿಂದ 5 ರಷ್ಟು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಈಗಾಗಲೇ ಹಲವು ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದು, ಟೋಲ್ ಶುಲ್ಕ ಪರಿಷ್ಕರಣೆ ವಾಹನ ಸವಾರರಿಗೆ ಬೆವರಿಳಿಸುವ ಸಾಧ್ಯತೆಯಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಾಜ್ಯ ಯೋಜನಾ ನಿರ್ದೇಶಕ ಕೆ.ಬಿ.ಜಯರಾಂ ಟೋಲ್ ಶುಲ್ಕ ಹೆಚ್ಚಳದ ಮುನ್ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿರುವ ಮೈಸೂರು-ಬೆಂಗಳೂರು ರಸ್ತೆ, ಬೆಂಗಳೂರು-ತಿರುಪತಿ ರಸ್ತೆ, ಬೆಂಗಳೂರು-ಹೈದರಾಬಾದ್ ರಸ್ತೆ, ಬೆಂಗಳೂರು ವಿಮಾನನಿಲ್ದಾಣ ರಸ್ತೆ, ದಾಬಸ್‌ಪೇಟ್-ದೇವನಹಳ್ಳಿ ನಡುವಿನ ಉಪನಗರ ವರ್ತುಲ ರಸ್ತೆ ಸೇರಿದಂತೆ 66 ಟೋಲ್‌ಗಳಲ್ಲಿ ಶುಲ್ಕ ಪರಿಷ್ಕರಣೆ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
