ಉದಯವಾಹಿನಿ, ಬೆಂಗಳೂರು,: ಪ್ರಸಕ್ತ ಸಾಲಿನ ಬಿಬಿಎಂಪಿ ಬಜೆಟ್ ಶನಿವಾರ ಮಂಡನೆಯಾಗಲಿದೆ. ಸರ್ಕಾರ ಇದೇ ಮೊದಲ ಬಾರಿಗೆ ಬಿಬಿಎಂಪಿಗೆ 7 ಸಾವಿರ ಕೋಟಿ ರೂ.ಗಳ ಅನುದಾನ ಘೋಷಣೆ ಮಾಡಿರುವುದರಿಂದ ಈ ಬಾರಿಯ ಬಜೆಟ್ 19 ಸಾವಿರ ಕೋಟಿ ರೂ.ಗಳ ಗಡಿ ದಾಟುವ ಸಾಧ್ಯತೆಗಳಿವೆ.
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಗರದ ಶಾಸಕರ ಸಭೆ ನಡೆಸಿದ ಬಳಿಕ ಬಜೆಟ್‌ನಲ್ಲಿ ಸಾಕಷ್ಟು ಬದಲಾವಣೆ ತರಲು ತೀರ್ಮಾನಿಸಲಾಗಿದೆ.ಶನಿವಾರ ಬೆಳಗ್ಗೆ 11 ಗಂಟೆಗೆ ಪುರಭವನದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧ್ಯಕ್ಷತೆಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯಯಕ್ತ ಹರೀಶ್ ಮಂಡನೆ ಮಾಡಲಿದ್ದಾರೆ. ದಾಖಲೆಯ 19 ಸಾವಿರ ಕೋಟಿ ಬಜೆಟ್?: ರಾಜಧಾನಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಯೋಜನೆಗಳನ್ನು ಕೈಗೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಬರೋಬ್ಬರಿ 7 ಸಾವಿರ ಕೋಟಿ ರೂ. ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಆಸ್ತಿ ತೆರಿಗೆ ಹಾಗೂ ಸರ್ಕಾರದ ಅನುದಾನ ನೆಚ್ಚಿಕೊಂಡು ಬಜೆಟ್ ಮಂಡಿಸುವ ಬಿಬಿಎಂಪಿಗೆ ಈ ಬಾರಿಯ ಸರ್ಕಾರದ ದೊಡ್ಡ ಮೊತ್ತದ ಅನುದಾನ ಘೋಷಣೆಯಿಂದ ಬಹುದೊಡ್ಡ ಬಲ ಸಿಕ್ಕಂತ್ತಾಗಿದೆ.
