ಉದಯವಾಹಿನಿ, ಬೆಂಗಳೂರು : ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಆರು ವರ್ಷಗಳ ಕಾಲ ಉಚ್ಛಾಟನೆಗೊಂಡಿರುವ ಹಿಂದೂ ಫೈರ್‌ ಬ್ರ್ಯಾಂಡ್‌ ಖ್ಯಾತಿಯ ಬಿಜಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರಕರಣದಿಂದ ಬಿಜೆಪಿಗೆ ಭದ್ರ ಬುನಾದಿಯಾಗಿದ್ದ ಪಂಚಮಸಾಲಿ ಸಮುದಾಯದ ಮತಗಳು ಕೈ ತಪ್ಪುವ ಭೀತಿ ಎದುರಾಗಿದೆ.

ಹಳ್ಳಿಯಿಂದ ದಿಲ್ಲಿಯವರೆಗೂ ನಡೆಯಲಿರುವ ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಗಳ ಸೋಲಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ಸಮುದಾಯವೇ ಪಂಚಮಸಾಲಿಗಳು. ವಿಶೇಷವಾಗಿ ಕಲ್ಯಾಣ ಕರ್ನಾಟ ಭಾಗದ ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬೀದರ್‌ ವಿಜಾಪುರ, ಕಲಬುರಗಿ ವಿಜಯನಗರ ಹಾಗೂ ಕಲ್ಯಾಣ ಕರ್ನಾಟಕದ ಹಾವೇರಿ, ಧಾರವಾಡ, ಬೆಳಗಾವಿ ಮಧ್ಯ ಕರ್ನಾಟಕದ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗಾ ಕೆಲವು ಭಾಗಗಳಲ್ಲಿ ಇವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್‌‍ ಸಮಿಶ್ರ ಸರ್ಕಾರ ಅಧಿಕಾರ ವಿಚ್ಛೇಧನ ಹಂತಕ್ಕೆ ಬಂದು, ಅಂದು ಮುಖ್ಯಮಂತ್ರಿಯಾಗಿದ್ದ ಹೆಚ್‌‍.ಡಿ.ಕುಮಾರಸ್ವಾಮಿ ಅವರು ಬಿ.ಎಸ್‌‍ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡದೇ ಇದ್ದಾಗ ವಚನ ಭ್ರಷ್ಟ ಆರೋಪದ ಮೇಲೆ ಬಿಜೆಪಿ ವೀಶಶೈವ – ಲಿಂಗಾಯಿತ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಯಶಸ್ವೀಯಾಗಿತ್ತು. ಆವರೆಗೂ ಒಬ್ಬ ಸಾಮಾನ್ಯ ನಾಯಕನಾಗಿದ್ದ ಯಡಿಯೂರಪ್ಪ, ಇದ್ದಕ್ಕೀದ್ದಂತೆ ವೀರಶೈವ ಸಮುದಾಯದ ಪ್ರಭಾವಿ ನಾಯಕನಾಗಿ ಹೊರ ಹೊಮ್ಮಿದ್ದು ಇದೇ ಕಾಲ ಘಟ್ಟದಲ್ಲಿ. ಅಂದಿನಿಂದ 2023 ರ ವಿಧಾನಸಭಾ ಚುನಾವಣೆವರೆಗೂ ಈ ಸಮುದಾಯ ಬಿಜೆಪಿಗೆ ಬೆಂಬಲವಾಗಿ ನಿಂತಿದ್ದು ಗುಟ್ಟಾಗಿ ಉಳಿದಿಲ್ಲ. ಆದರೆ, ಕೇಂದ್ರ ಬಿಜೆಪಿ ವರಿಷ್ಟರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಮೇಲೆ ಇದೇ ಸಮುದಾಯ ಕಾಂಗ್ರೆಸ್‌‍ ಕಡೆ ಸ್ವಲ್ಪ ಮಟ್ಟದಲ್ಲಿ ವಾಲಿತ್ತು. ಆದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಸಮುದಾಯದ ಮತಗಳನ್ನು ಸೆಳೆಯವಲ್ಲಿ ಪುನಃ ಯಶಸ್ವಿಯಾಗಿತ್ತು.

Leave a Reply

Your email address will not be published. Required fields are marked *

error: Content is protected !!