ಉದಯವಾಹಿನಿ, ಬೆಂಗಳೂರು: ನಾನು ಹಿಂದೊಂದು, ಮುಂದೊಂದು ಮಾತನಾಡುವ ವ್ಯಕ್ತಿಯಲ್ಲ. ಯಡಿಯೂರಪ್ಪ ಅನೇಕರನ್ನು ಬೆಳೆಸಿದ್ದಾರೆ. ಅವರು ತಮ್ಮ ಜೀವನದಲ್ಲಿ ಮತ್ತೊಬ್ಬರನ್ನು ತುಳಿಯುವ ಕೆಲಸ ಮಾಡಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮದವರ ಜೊತೆ ಶನಿವಾರ ಮಾತನಾಡಿದ ಅವರು, ರಾಜ್ಯಾಧ್ಯಕ್ಷನಾಗಿ ನನಗೆ ನನ್ನ ಕರ್ತವ್ಯದ ಅರಿವು ನನಗೂ ಇದೆ. ಎಲ್ಲವನ್ನೂ ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.ಕೇಂದ್ರದ ವರಿಷ್ಠರು ಹಲವು ಬಾರಿ ಯತ್ನಾಳರಿಗೆ ನೋಟಿಸ್ ಕೊಟ್ಟು ಅವರನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ರಾಜ್ಯಾಧ್ಯಕ್ಷನಾಗಿ ನಾನು ಪಕ್ಷದ ಮುಖಂಡರ ಜೊತೆ ಯತ್ನಾಳರನ್ನು ಭೇಟಿ ಮಾಡಿ, ಪಕ್ಷದ ಹಿತದೃಷ್ಟಿಯಿಂದ ಸಣ್ಣಪುಟ್ಟ ಗೊಂದಲ ಸರಿಪಡಿಸಿಕೊಳ್ಳೋಣ ಎಂದಿದ್ದೆ. ಸದನ ಇದ್ದಾಗ ಭೋಜನಕೂಟಕ್ಕೂ ನಾನೇ ಆಹ್ವಾನಿಸಿದ್ದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಪಕ್ಷದ ಕೇಂದ್ರದ ವರಿಷ್ಠರು ಸಾಕಷ್ಟು ಸಮಯ ಕಾದಿದ್ದಾರೆ. ವರಿಷ್ಠರು ಇದೆಲ್ಲವನ್ನೂ ಗಮನಿಸಿ ಉಚ್ಚಾಟನೆಯ ಅಂತಿಮ ನಿರ್ಧಾರ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಸ್ವಂತ ಬಲದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನನಗೆ ಈ ಜವಾಬ್ದಾರಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಆಗಬೇಕೆಂದು ಅಲ್ಲ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ: ಬೆಂಗಳೂರಿನ ಫ್ರೀಡಂಪಾರ್ಕಿನಲ್ಲಿ ಏಪ್ರಿಲ್ 2ರಂದು ಬೆಳಿಗ್ಗೆ 11 ಗಂಟೆಯಿಂದ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ಪ್ರಾರಂಭಿಸಲಿದ್ದೇವೆ. ಬಿಜೆಪಿಯ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು, ಜಿಲ್ಲಾ ಅಧ್ಯಕ್ಷರು, ರಾಜ್ಯದ ಎಲ್ಲ ಪದಾಧಿಕಾರಿಗಳು ಈ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪಕ್ಷದ ಎಲ್ಲ ಮುಖಂಡರು ಕುಳಿತು ಅನೇಕ ವಿಚಾರಗಳನ್ನು ಚರ್ಚಿಸಿದ್ದೇವೆ. ವಿಶೇಷವಾಗಿ ರಾಜ್ಯ ಸರ್ಕಾರವು ಬೆಲೆ ಏರಿಕೆಯ ಗ್ಯಾರಂಟಿ ನೀಡಿದೆ. ನೀರಿನ ದರ, ಪೆಟ್ರೋಲ್ ದರ ಹೆಚ್ಚಿಸಿದರು. ಹಾಲಿನ ದರವನ್ನೂ ಮೂರನೇ ಬಾರಿಗೆ ಜಾಸ್ತಿ ಮಾಡಿದ್ದಾರೆ. ಹಾಲಿನ ಬೆಲೆ ಏರಿಕೆ ಜನರಿಗೆ ಯುಗಾದಿ ಕೊಡುಗೆಯಂತಿದೆ ಎಂದು ವ್ಯಂಗ್ಯವಾಡಿದರು.

Leave a Reply

Your email address will not be published. Required fields are marked *

error: Content is protected !!