ಉದಯವಾಹಿನಿ,ಮಡಿಕೇರಿ: ಮುಂಗಾರು ಹಿನ್ನೆಲೆ ಕೊಡಗು ಜಿಲ್ಲೆಯಲ್ಲೆಡೆ ಅಚ್ಚಹರಿಸಿನ ವಾತಾವರಣ ನಿರ್ಮಾಣವಾಗಿದ್ದು, ಇಲ್ಲಿ ನಿಸರ್ಗದ ಸ್ವರ್ಗವೇ ನಿರ್ಮಾಣವಾದಂತೆ ಭಾಸವಾಗುತ್ತಿದೆ. ಹಾಗೆಯೇ ಈ ಭಾಗದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಹಸಿರು ಹಾಸಿದೆ. ಮೋಡದ ಮುಸುಕು ಸರಿಸಲೇನೋ ಎಂಬಂತೆ ಆಗೊಮ್ಮೆ ಈಗೊಮ್ಮೆ ಸುರಿಯುವ ಮಳೆ, ಗಿಡ ಮರಗಳ ನಡುವೆ ಅವಿತು ಕಣ್ಣುಮುಚ್ಚಾಲೆಯಾಡುವ ಮಂಜು, ಇದನ್ನೆಲ್ಲ ಹಾಗೆ ಸುಮ್ಮನೆ ನಿಂತು ನೋಡಿದರೆ ನಿಸರ್ಗವೇ ಧರೆಗಿಳಿದಿದೆ ಅನಿಸುತ್ತದೆ. ಕೊಡಗು ಏಕೆ ಇಷ್ಟವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಹೇಳಲೇನೋ ಎಂಬಂತೆ ಇದೀಗ ಇಲ್ಲಿನ ನಿಸರ್ಗ ಸಿರಿ ಸರ್ವ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಮುಂಗಾರು ಮಳೆಯಲ್ಲಿ ಮಿಂದೇಳಲು ಸಜ್ಜಾಗಿದೆ.
ಮುಂಗಾರು ಆರಂಭದ ದಿನಗಳಲ್ಲಿ ಕೊಡಗಿಗೆ ಭೇಟಿ ನೀಡುವುದೇ ಒಂಥರಾ ಮಜಾ ಅನಿಸುತ್ತದೆ. ಜಿಟಿ ಜಿಟಿ ಮಳೆಯೊಂದಿಗೆ ಬೆಟ್ಟಗುಡ್ಡವನ್ನೆಲ್ಲಾ ಮುಸುಕು ಹಾಕಿ ಮಲಗಿದೆಯೇ ಎಂಬಂತೆ ಹರಡಿಕೊಳ್ಳುವ ಮಳೆ ಮೋಡ ಮತ್ತು ಅದರಾಚೆಗೆ ಯಾರೆಂದು ಗೊತ್ತಾಗದಷ್ಟು ದಟ್ಟವಾದ ಮಂಜು, ಇದರ ನಡುವೆ ಸಣ್ಣಗೆ ಮೈನಡುಗಿಸುವ ಚಳಿಯೂ ಅದ್ಭತ ಅನುಭವ ಕೊಡಲಿದೆ. ದೂರದಿಂದ ಬೇಸಿಗೆಯ ಬಿಸಿಲಲ್ಲಿ ಬೆಂದು ಬಂದವರು ಇಲ್ಲಿನ ವಾತಾವರಣ ಬೇಗನೇ ಹೊಂದಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಭೂಮಿ ಮೇಲಿನ ನಿಸರ್ಗ ಸೌಂದರ್ಯ ತಮ್ಮ ಎದುರೇ ಬಂದು ನಿಂತಂತಹ ಅನುಭವ ಆಗುತ್ತದೆ. ನಿಜಕ್ಕೂ ಕೊಡಗಿನ ಸೌಂದರ್ಯವೇ ಹಾಗೆ. ಇಲ್ಲಿನ ವಾತಾವರಣ, ಪ್ರಕೃತಿಯ ಮೆರಗು, ಜನ, ಆಚಾರ, ವಿಚಾರ, ಕಲೆ ಸಂಸ್ಕೃತಿ ಎಲ್ಲವೂ ವಿಭಿನ್ನ ಹಾಗೂ ವಿಶಿಷ್ಟ.
