ಉದಯವಾಹಿನಿ,ಬೆಂಗಳೂರು : ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಮುಗಿಸಲು ಅವರ ವಿರುದ್ಧ ಬಸನಗೌಡ ಪಾಟೀಲ್ ಅವರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂಬ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಯತ್ನಾಳ್, ಎಂ.ಬಿ.ಪಾಟೀಲ್ ಅವರೇ ನಿಮ್ಮ ಬಗ್ಗೆ ನನಗೆ ಅಯ್ಯೋ ಅನ್ನಿಸುತ್ತಿದೆ. ನಿಮ್ಮಲ್ಲಿ ಇರುವ ರೀತಿ ಎಲ್ಲಾ ಪಕ್ಷದಲ್ಲಿರುತ್ತದೆ ಎಂದು ಭಾವಿಸಬೇಡಿ, ದಲಿತ ನಾಯಕರಾದ ಶ್ರೀ ಡಾ. ಜಿ ಪರಮೇಶ್ವರ್ ಅವರನ್ನು ಮುಗಿಸಲು ಸಿದ್ದರಾಮಯ್ಯನವರು ಯಾರ ಹೆಗಲ ಮೇಲೆ ಇಟ್ಟು ಗುಂಡು ಹೊಡೆದರು? ನಿಮಗೆ “ಭಾರಿ ಸಂಪನ್ಮೂಲ” ಜಲಸಂಪನ್ಮೂಲ ಇಲಾಖೆ ಸಿಗಲಿಲ್ಲ ಅನ್ನುವ ಕಾರಣಕ್ಕೆ ಡಿ.ಕೆ ಶಿವಕುಮಾರ್ ಅವರ ವಿರುದ್ಧ ನಿಮ್ಮ ಹೆಗಲ ಮೇಲೆ ಬಂದೂಕು ಇಟ್ಟಿರುವುದು ಯಾರು? ಹಾ! ಮೊನ್ನೆ ನಿಮ್ಮ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಡಿಕೆಶಿಯವರು ನಿಮಗೆ ಅಲ್ವಾ ,”Dont Disturb” ಅಂದಿದ್ದು, ನಿಮ್ಮಂತಹ ಹಿರಿಯ ಲಿಂಗಾಯತ ನಾಯಕರನ್ನು ಕಾಂಗ್ರೆಸ್ ಪಕ್ಷ ಹೀಗೆ ನಡೆಸಿಕೊಳ್ಳಬಾರದಿತ್ತು ಬಿಡಿ ಎಂದು ತಿರುಗೇಟು ನೀಡಿದ್ದಾರೆ. ಸಚಿವ ಎಂ.ಬಿ.ಪಾಟೀಲ್ ಅವರು, ಬಿ.ಎಸ್. ಸಂತೋಷ್ ಅವರೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ತಮ್ಮ ಕೊಡುಗೆಯೂ ಅಪಾರ. ಅದಕ್ಕೆ ನಾವು ನಿಮಗೆ ಆಭಾರಿ. ನೀವು ಬಿಜೆಪಿಯಲ್ಲಿನ ಅನೇಕ ಲಿಂಗಾಯತ ನಾಯಕರನ್ನು ಮುಗಿಸಿದ್ದೀರಿ ಎಂದು ರಾಜ್ಯದ ಜನತೆ ಮಾತನಾಡುತ್ತಿದ್ದಾರೆ.
