ಉದಯವಾಹಿನಿ,ಚಿಕ್ಕಮಗಳೂರು : ಆಗಸ್ಟ್ 18 ರಂದು ‘ಯಜಮಾನಿ’ ಮಹಿಳೆಯ ಖಾತೆಗೆ 2 ಸಾವಿರ ಹಣ ಜಮಾ ಮಾಡಲಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಚಿಕ್ಕಮಗಳೂರಿನ ಗೌರಿಗದ್ದೆಗೆ ಭೇಟಿ ನೀಡಿದ ಸಚಿವೆ ಚಂಡಿಕಾಯಾಗದಲ್ಲಿ ಭಾಗಿಯಾಗಿ ನಂತರ ಮಾತನಾಡಿದರು. ಮಹಿಳೆಯರಿಗೆ 2000 ರೂಪಾಯಿ ಮಾಸಿಕ ಸಹಾಯಧನ ಯೋಜನೆ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ಕೊಂಚ ವಿಳಂಬವಾಗುತ್ತಿದೆ. ಯೋಜನೆಯಲ್ಲಿ ಕೆಲವೊಂದು ಬದಲಾವಣೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಿರುವುದರಿಂದ ಹಾಗೂ ಗೃಹಲಕ್ಷ್ಮಿ ಯೋಜನೆಗಾಗಿಯೇ ಪ್ರತ್ಯೇಕ ಆಪ್ ಸಿದ್ಧಪಡಿಸಲು ಹೇಳಿದ್ದೇವೆ. ಹಾಗಾಗಿ ಅರ್ಜಿ ಸಲ್ಲಿಕೆಗೆ ಸ್ವಲ್ಪ ವಿಳಂಬವಾಗುತ್ತಿದೆ ಎಂದರು.
ಯೋಜನೆ ಜನರಿಗೆ ಸರಳವಾಗಿ ಸಿಗಬೇಕು ಎಂಬುದು ಸರ್ಕಾರದ ಉದ್ದೇಶ. ಆಗಸ್ಟ್ 17 ಅಥವಾ 18ಕ್ಕೆ ಫಲಾನುಭವಿಗಳ ಖಾತೆಗೆ ಖಂಡಿತವಾಗಿ ಯೋಜನೆಯ ಹಣವನ್ನು ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು. ಜನರಿಗೆ ಯೋಜನೆ ಸರಳವಾಗಿ ಸಿಗಬೇಕು ಎನ್ನುವ ಕಾರಣಕ್ಕೆ ಅರ್ಜಿಯಲ್ಲಿ ಕೆಲವು ಬದಲಾವಣೆಯನ್ನು ಮಾಡುವುದಕ್ಕೆ ಸೂಚಿಸಲಾಗಿದೆ. ಹೀಗಾಗಿ ವಿಳಂಬವಾಗುತ್ತಿದೆ ಎಂದು ಹೇಳಿದರು. ವಿನಯ್ ಗುರೂಜಿ ಮಳೆಗಾಗಿ ಚಂಡಿಕಾಯಾಗ ಸಂಕಲ್ಪ ಮಾಡಿದ್ದು, ಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್, ಸಚಿವ ಡಿ.ಸುಧಾಕರ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಶಾಸಕರು ಭಾಗಿಯಾಗಿದ್ದಾರೆ.
