ಉದಯವಾಹಿನಿ, ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ 40ಕ್ಕೂ ಹೆಚ್ಚು ಕನ್ನಡಿಗರು ಭಯೋತ್ಪಾದಕ ದಾಳಿಯಲ್ಲಿ ಸಿಲುಕಿಕೊಂಡಿದ್ದು ಅವರೆಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ಮರಳಿ ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳೊಂದಿಗೆ ಅವರು ದೂರವಾಣಿ ಮೂಲಕ ಮಾತನಾಡಿ ಸಂತಾಪ ಸೂಚಿಸಿದ್ದಾರೆ. ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಕರ್ನಾಟಕದ ಇಬ್ಬರು ಸೇರಿದ್ದಾರೆ.
ಶಿವಮೊಗ್ಗದ ಮಂಜುನಾಥ ರಾವ್ ಅವರ ಪತ್ನಿ ಪಲ್ಲವಿ ಮತ್ತು ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ ಅವರ ಪತ್ನಿ ಸುಜಾತಾ ಅವರೊಂದಿಗೆ ಮುಖ್ಯಮಂತ್ರಿ ಮಾತನಾಡಿ ಸಂತಾಪ ಸೂಚಿಸಿದ್ದಾರೆ ಎಂದು ಸಿಎಂ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಭರತ್ ಭೂಷಣ್ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದರು, ಅವರ ಪತ್ನಿ ಸುಜಾತಾ ಮತ್ತು ಅವರ ಮೂರು ವರ್ಷದ ಮಗ ಪ್ರಾಣಾಪಾಯದಿಂದ ಪಾರಾಗಿದ್ದರು. ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ ಅವರನ್ನು ಅವರ ಪತ್ನಿ ಮತ್ತು ಮಗನ ಸಮ್ಮುಖದಲ್ಲಿ ಕೊಲ್ಲಲಾಯಿತು.
