ಉದಯವಾಹಿನಿ, ಬೆಂಗಳೂರು: ಹೆಚ್ಚಾಗಿ ಜೋಳ ಬೆಳೆಯವ ಜಿಲ್ಲೆಗಳು ಹಾಗೂ ರಾಜ್ಯದಾದ್ಯಂತ ಹಿಂಗಾರು ಹಂಗಾಮಿನ ಅವಧಿಯಲ್ಲಿ ಬೆಳೆಯಲಾದ ಹೆಚ್ಚುವರಿ ಜೋಳವನ್ನು ಬೆಂಬಲ ಬೆಲೆ ಯೋಜನೆಯಡಿ ಒಂದು ಲಕ್ಷ ಮೆಟ್ರಿಕ್ ಟನ್ ಜೋಳವನ್ನು ರೈತರಿಂದ ನೇರವಾಗಿ ಖರೀದಿ ಕೇಂದ್ರಗಳ ಮೂಲಕ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರವರ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆಯ ರೈತರು, ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿ ಮಾತನಾಡಿದರು.
ಬಳ್ಳಾರಿ, ರಾಯಚೂರು, ವಿಜಯನಗರ ಹೆಚ್ಚಾಗಿ ಜೋಳ ಬೆಳೆಯುವ ಜಿಲ್ಲೆಗಳಾಗಿದ್ದು ಹಾಗೂ ರಾಜ್ಯಾದ್ಯಂತ ಹಿಂಗಾರು ಹಂಗಾಮಿನ ಅವಧಿಯಲ್ಲಿ ಹೆಚ್ಚಿನ ಜೋಳ ಬೆಳೆಯುವ ಜಿಲ್ಲೆಗಳಿಂದ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 1 ಲಕ್ಷ ಮೆಟ್ರಿಕ್ ಟನ್ ಜೋಳ ಖರೀದಿಸಲಾಗುವುದು ಎಂದರು.
ಪ್ರತಿ ಕ್ವಿಂಟಾಲ್ ಜೋಳದ ದರ ಹೈಬ್ರಿಡ್ 3371 ಮಾಲ್ದಂಡಿ ಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ 3421 ದರವನ್ನು ನಿಗದಿಪಡಿಸಲಾಗಿದೆ. ಈಗಾಗಲೇ ನೊಂದಾಯಿಸಿದ ರೈತರು ಹಾಗೂ ಹೊಸದಾಗಿ ನೊಂದಾಯಿಸುವ ರೈತರು ಸಹ ತಾವು ಬೆಳೆದ ಬೆಲೆಯನ್ನು ನಿರ್ದಿಷ್ಟ ಖರೀದಿ ಕೇಂದ್ರದ ಸ್ಥಳದಲ್ಲಿ ನೊಂದಣಿ ಮಾಡಿಕೊಂಡು ಸರ್ಕಾರಕ್ಕೆ ನೀಡಲು ಕೋರಿದೆ ಎಂದರು.
