ಉದಯವಾಹಿನಿ, ಬೀಜಿಂಗ್: ‘ಅಮೆರಿಕದೊಂದಿಗಿನ ಪ್ರತಿಸುಂಕ ಸಮರಕ್ಕೆ ಇತಿಶ್ರೀ ಹಾಡಲು ದ್ವಿಪಕ್ಷೀಯ ಮಾತುಕತೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸುವ ಯಾವುದೇ ಲಕ್ಷಣಗಳಿಲ್ಲ’ ಎಂದು ಹೇಳಿರುವ ಚೀನಾ, ಮಾತುಕತೆಗೆ ನಿರಾಕರಿಸಿದೆ. ‘ಸುಂಕದ ಕುರಿತು ಚೀನಾ ಮತ್ತು ಅಮೆರಿಕ ಯಾವುದೇ ಸಮಾಲೋಚನೆ ಅಥವಾ ಚರ್ಚೆ ನಡೆಸಿಲ್ಲ.
ಇನ್ನು ಒಪ್ಪಂದ ದೂರದ ಮಾತಾಯಿತು’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೋ ಜೈಕುನ್ ಮಾಧ್ಯಮಗಳಿಗೆ ಹೇಳಿದ್ದಾರೆ.
‘ಸುಂಕ ಸಮರವನ್ನು ಅಮೆರಿಕ ಆರಂಭಿಸಿದೆ. ಈ ವಿಷಯದಲ್ಲಿ ಚೀನಾದ ನಿಲುವು ಸ್ಪಷ್ಟವಾಗಿದೆ. ಅನಿವಾರ್ಯವಾದಲ್ಲಿ ಚೀನಾ ಹೋರಾಡಲಿದೆ. ಮಾತುಕತೆಗೆ ಅಮೆರಿಕ ಸಿದ್ಧವಿದ್ದರೆ ನಮ್ಮ ಬಾಗಿಲು ಸದಾ ತೆರೆದಿರುತ್ತದೆ. ಮಾತುಕತೆ ಮತ್ತು ಚರ್ಚೆಗಳು ಸಮಾನತೆ, ಗೌರವ ಮತ್ತು ಪರಸ್ಪರ ಲಾಭವನ್ನು ಆಧರಿಸಿರುತ್ತದೆ’ ಎಂದಿದ್ದಾರೆ.
‘ಒಂದೊಮ್ಮೆ ಈ ಸಮಸ್ಯೆಯನ್ನು ಪರಿಹರಿಸಲು ಅಮೆರಿಕ ಇಚ್ಛಿಸಿದ್ದೇ ಆದಲ್ಲಿ, ಅದು ಅಂತರರಾಷ್ಟ್ರೀಯ ಸಮುದಾಯ ಮತ್ತು ದೇಶೀಯ ಮಧ್ಯಸ್ಥಿಕೆಗಾರರ ತರ್ಕಬದ್ಧ ಮಾತುಗಳನ್ನು ಆಲಿಸಬೇಕು. ಚೀನಾದ ಉತ್ಪನ್ನಗಳ ಮೇಲಿನ ಏಕಪಕ್ಷೀಯ ಸುಂಕವನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಹಾಗೂ ಸಮಾನ ಸಂವಾದಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ.
