ಉದಯವಾಹಿನಿ, ಬೆಂಗಳೂರು: ಬಹುಕೋಟಿ ಮೌಲ್ಯದ ಚಿನ್ನ ವಂಚನೆ ಪ್ರಕರಣದಲ್ಲಿ ತಳಕು ಹಾಕಿಕೊಂಡಿರುವ ಶಾಸಕ ಹಾಗೂ ಮಾಜಿ ಸಚಿವ ವಿನಯ್‌ ಕುಲಕರ್ಣಿಯನ್ನು ಜಾರಿ ನಿರ್ದೇಶನಾಲಯ(ಇ.ಡಿ) ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ.
ಬೆಂಗಳೂರಿನ ಡಾಲರ್‌ರ‍ಸ ಕಾಲೋನಿಯಲ್ಲಿರುವ ವಿನಯ್‌ ಕುಲಕರ್ಣಿ ನಿವಾಸದಲ್ಲಿ ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಇಂದು ಕೂಡ ಪರಿಶೀಲನೆ ಮುಂದುವರೆದಿದ್ದು, ಪ್ರಕರಣದಲ್ಲಿ ವಿನಯ್‌ ಕುಲಕರ್ಣಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ ಇ.ಡಿ ಅಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ ಎಂದು ಇ.ಡಿ ಮೂಲಗಳು ತಿಳಿಸಿವೆ.ಗುರುವಾರಷ್ಟೇ ಈ ಪ್ರಕರಣದ ಕಿಂಗ್‌ಪಿನ್‌ ಎಂದೇ ಹೇಳಲಾಗುತ್ತಿರುವ ವಂಚಕಿ ಐಶ್ವರ್ಯ ಗೌಡ ಅವರನ್ನು ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದು ಬಂಧಿಸಿ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ಕಾಲ ತಮ ವಶಕ್ಕೆ ಪಡೆದಿದ್ದಾರೆ.
ಚಿನ್ನ ಹಾಗೂ ಕೆಲ ವ್ಯವಹಾರದಲ್ಲಿ ಐಶ್ವರ್ಯ ಗೌಡ ಜೊತೆ ವಿನಯ್‌ ಕುಲಕರ್ಣಿ ವ್ಯವಹಾರ ನಡೆಸಿರುವುದು ದಾಖಲೆಗಳಲ್ಲಿ ಕಂಡುಬಂದಿದೆ. ಅವರ ನಿವಾಸದಲ್ಲಿ ಸಿಕ್ಕಿರುವ ದಾಖಲೆಗಳಲ್ಲಿ ಕೋಟ್ಯಂತರ ರೂ. ಬೇನಾಮಿ ವ್ಯಾಪಾರ ವಹಿವಾಟು ನಡೆಸಿರುವುದು ಪತ್ತೆಯಾಗಿದೆ.ಈ ಹಿನ್ನೆಲೆಯಲ್ಲಿ ವಿನಯ್‌ ಕುಲಕರ್ಣಿಯವರನ್ನೂ ಬಂಧಿಸಲು ಇ.ಡಿ ಅಧಿಕಾರಿಗಳು ಸಜ್ಜಾಗಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿರುವ ಶಾಸಕ ವಿನಯ್‌ ಕುಲಕರ್ಣಿ ಅವರ ಮನೆ ಹಾಗೂ ಐಶ್ವರ್ಯ ಅವರ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಮನೆ ಮತ್ತು ಬೆಂಗಳೂರಿನ ನಿವಾಸದ ಮೇಲೆ ಇಡಿ ದಾಳಿ ನಡೆಸಿತ್ತು.ಐಶ್ವರ್ಯಗೌಡ ಅವರು ಮಾಜಿ ಸಂಸದ ಡಿ.ಕೆ.ಸುರೇಶ್‌ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೆಸರು ಹೇಳಿಕೊಂಡು ಚಿನ್ನದ ವ್ಯಾಪಾರಿಗಳು, ವೈದ್ಯರು, ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಸೇರಿದಂತೆ ಹಲವಾರು ಮಂದಿಗೆ ಬಹುಕೋಟಿ ವಂಚನೆ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ನಾಲ್ಕು ಪ್ರಕರಣಗಳು ದಾಖಲಾಗಿವೆ.

Leave a Reply

Your email address will not be published. Required fields are marked *

error: Content is protected !!