ಉದಯವಾಹಿನಿ,ಕೋಲಾರ: ಕಾಶ್ಮೀರದಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದಿರುವ ದಾಳಿ ಖಂಡನೀಯವಾಗಿದ್ದು, ಕೇಂದ್ರ ಸರ್ಕಾರ ಇದಕ್ಕೆ ತಕ್ಕ ಉತ್ತರ ನೀಡಬೇಕು ಮತ್ತು ಘಟನೆಗೆ ಕಾರಣವಾದ ಪಾಪಿ ಉಗ್ರರನ್ನು ಸರ್ವನಾಶ ಮಾಡಬೇಕು ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಆಗ್ರಹಿಸಿದರು.ಬೈಕ್ ರ್‍ಯಾಲಿಗೂ ಮುನ್ನ ವಕೀಲರ ಸಂಘದ ಸಭಾಂಗಣದಲ್ಲಿ ಕಾಶ್ಮೀರ ದಾಳಿಯಲ್ಲಿ ಹುತಾತ್ಮರಾದವರಿಗೆ ಮೌನ ಆಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಭಾರತೀಯರು ಸದಾ ಸಹಿಷ್ಣುಪರತೆ, ಸೌಹಾರ್ದತೆಗೆ ಹೆಸರಾಗಿದ್ದಾರೆ, ನಾವು ಶಾಂತಿಪ್ರಿಯರು ನಿಜ ಆದರೆ ನಮ್ಮ ತಂಟೆಗೆ ಬಂದರೆ ಸುಮ್ಮನಿರುವವರು ಅಲ್ಲ ಎಂಬುದನ್ನು ಪಾಪಿಗಳಿಗೆ ತಿಳಿಸಿಕೊಡಲು ಕೇಂದ್ರ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು, ಇದಕ್ಕೆ ನಮ್ಮ ವಕೀಲ ಸಮುದಾಯ ನಿಮ್ಮೊಂದಿಗೆ ಇರುತ್ತದೆ ಎಂದರು.
ಈ ಘಟನೆ ಬಹಳ ನೋವುಂಟು ಮಾಡಿದ್ದು, ಅಮಾಯಕ ಪ್ರವಾಸಿಗರ ಮೇಲೆ ನಡೆದಿರುವ ದಾಳಿ ಪಾಪಿಗಳ ಅಮಾನವೀಯ ವರ್ತನೆಗೆ ಸಾಕ್ಷಿಯಾಗಿದೆ, ಅವರು ನಿಜಕ್ಕೂ ಮನುಷ್ಯರಲ್ಲ, ಅಂತಹ ನೀಚ ಮೃಗಗಳನ್ನು ಸದೆಬಡಿಯಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿದರು.
ಇಂತಹ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಭಾರತ ಈಗಾಗಲೇ ತಕ್ಕರಾಜತಾಂತ್ರಿಕ ಉತ್ತರ ನೀಡಿದ್ದು, ಮುಂದೆಯೂ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಈಘಟನೆಗೆ ಕಾರಣರಾದ ನೀಚ ಉಗ್ರಗಾಮಿಗಳನ್ನು ಹುಡುಕಿ ಗುಂಡಿಕ್ಕಿ ಕೊಲ್ಲುವ ಮೂಲಕ ಭಾರತದ ಶಕ್ತಿ ಏನೆಂಬುದನ್ನು ವಿಶ್ವಕ್ಕೆ ತೋರಿಸಬೇಕಾಗಿದೆ ಎಂದ ಅವರು, ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಇಡೀ ದೇಶವೇ ಹುತಾತ್ಮರಾದವರ ಕುಟುಂಬಗಳ ಜತೆಗಿದೆ ಎಂದರು.
ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಪೂರ್ಣ ಅಧಿಕಾರ ನೀಡಿ ಇಂತಹ ದೇಶದ್ರೋಹಿಳನ್ನು ಮಟ್ಟಹಾಕಬೇಕು ಎಂದು ಒತ್ತಾಯಿಸಿದರು. ಈ ದಾಳಿಯಲ್ಲಿ ಕರ್ನಾಟಕದ ನಮ್ಮ ಸಹೋದರರೂ ಬಲಿಯಾಗಿದ್ದಾರೆ, ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಅವಕಾಶ ಇರಲಿಲ್ಲ, ಕೇಂದ್ರ ಸರ್ಕಾರದ ದಿಟ್ಟ ಕ್ರಮದಿಂದ ೩೭೦ನೇ ವಿಧಿಯನ್ನು ತೆಗೆದು ಹಾಕಿ ಕಾಶ್ಮೀರ ಭಾರತದ ಅವಿಭಾಜ್ಯ ಭಾಗ ಎಂದು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿರುವುದು ಶ್ಲಾಘನೀಯ ಎಂದರು.
