ಉದಯವಾಹಿನಿ, ಕೋಲಾರ: ನಾನು ಜಿಲ್ಲಾ ಹಾಲು ಒಕ್ಕೂಟದ (ಕೋಮುಲ್) ಚುನಾವಣೆಯಲ್ಲಿ ಕೋಲಾರ ನೈರುತ್ಯ ಕ್ಷೇತ್ರಕ್ಕೆ ಆಕಾಂಕ್ಷಿ ಆಗಿದ್ದೇನೆ. ಆದರೆ, ಕಾಂಗ್ರೆಸ್ ಸೇರುತ್ತೇನೆ ಎಂಬುದಾಗಿ ಕೆಲ ಕಿಡಿಗೇಡಿಗಳು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೋಚಿಮುಲ್ ಮಾಜಿ ನಿರ್ದೇಶಕ ಹಾಗೂ ಜೆಡಿಎಸ್ ಮುಖಂಡ ವಡಗೂರು ಹರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಎರಡು ತಿಂಗಳ ಹಿಂದೆ ಕಾಂಗ್ರೆಸ್‌ಗೆ ಆಹ್ವಾನ ನೀಡಿದ್ದು ನಿಜ. ಅವರಿಗೆ ಕೋಚಿಮುಲ್ ವಿಚಾರದಲ್ಲಿ ಪಕ್ಷಾತೀತವಾಗಿ ಬೆಂಬಲ ನೀಡಿದ್ದು ಕೂಡ ನಿಜ. ರೈತರು ಹಾಗೂ ಡೇರಿಯ ಹಿತದೃಷ್ಟಿಯಿಂದ ನಾನು, ಕಾಡೇನಹಳ್ಳಿ ನಾಗರಾಜ್, ಮಾಲೂರು ಪ್ರಸನ್ನ ಬೆಂಬಲ ನೀಡಿದ್ದೆವು. ಇದರಲ್ಲಿ ಬೇರೆ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ ಎಂದಿದ್ದಾರೆ.
ನಾನು ಕಾಂಗ್ರೆಸ್ ಹೋಗುತ್ತೇನೆ ಎಂಬ ವದಂತಿ ಶುದ್ಧ ಸುಳ್ಳು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಎಂ.ಮಲ್ಲೇಶ್ ಬಾಬು ಜೊತೆ ನಾನು ನಿಕಟ ಸಂಪರ್ಕ ಹೊಂದಿದ್ದೇನೆ. ಸ್ಥಳೀಯವಾಗಿ ನಾವೆಲ್ಲಾ ಒಗ್ಗಟ್ಟಿನಿಂದ ಕೆಲಸ ಮಾಡಿ ಮಲ್ಲೇಶ್ ಬಾಬು ಅವರನ್ನು ಗೆಲ್ಲಿಸಿದ್ದೇವೆ. ದೇಶದಲ್ಲಿನ ಕೆಲ ಬದಲಾವಣೆ, ಬೆಳವಣಿಗೆಗಳ ಬಗ್ಗೆ ಸಾರ್ವಜನಿಕರು ಕಾಂಗ್ರೆಸ್ ನಿಲುವುಗಳ ಬಗ್ಗೆ ಬೇಸರ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.ನಾನು ಜೆಡಿಎಸ್ ತೊರೆಯುವ ಪ್ರಶ್ನೆಯೇ ಇಲ್ಲ. ಅಂಥ ಸಂದರ್ಭ ಬಂದರೆ ರಾಜಕಾರಣಕ್ಕೆ ನಿವೃತ್ತಿ ಘೋಷಿಸುತ್ತೇನೆ. ಆದರೆ, ಅಂಥ ಯಾವುದೇ ಸಂದರ್ಭ ಈಗ ಬಂದಿಲ್ಲ ಎಂದಿದ್ದಾರೆ.
