ಉದಯವಾಹಿನಿ, ಬೆಂಗಳೂರು: ಬಾಲಿವುಡ್ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡಿಗರು, ಕನ್ನಡಪರ ಸಂಘಟನೆಗಳು ಕೆರಳಿ ಕೆಂಡವಾಗಿವೆ. ಅಭಿಮಾನಿಯೊಬ್ಬರ ಕನ್ನಡ ಅಭಿಮಾನವನ್ನು ಪಹಲ್ಗಾಮ್ ಘಟನೆಗೆ ಹೋಲಿಸಿದ ಸೋನು ನಿಗಮ್ ವರ್ತನೆಯನ್ನು ತೀವ್ರವಾಗಿ ಖಂಡಿಸಿರುವ ಕನ್ನಡಪರ ಸಂಘಟನೆಗಳು ಬಹಿರಂಗ ಕ್ಷಮೆಗೆ ಆಗ್ರಹಿಸಿರುವುದಲ್ಲದೆ ಕನ್ನಡ ಚಿತ್ರರಂಗದಿಂದಲೇ ಸೋನು ನಿಗಮ್ ಅವರನ್ನು ನಿಷೇಧಿಸಬೇಕೆಂದು ಒತ್ತಾಯಿಸಿವೆ.
ಕರವೇ ಅಧ್ಯಕ್ಷ ನಾರಾಯಣ ಗೌಡ, ಡಾ.ರಾಜ್‌ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ, ಚಲನಚಿತ್ರ ನಿರ್ದೇಶಕರು, ಗಾಯಕರು, ಕನ್ನಡಪರ ಹೋರಾಟಗಾರರು ಸೇರಿದಂತೆ ಕನ್ನಡ ಮನಸ್ಸುಗಳು ಸೋನು ನಿಗಮ್ ಅವರ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿರುವುದಲ್ಲದೆ ಕಾನೂನು ಹೋರಾಟಕ್ಕೂ ಮುಂದಾಗಿವೆ.
ಯಾವುದೇ ಕಾರಣಕ್ಕೂ ಸೋನು ನಿಗಮ್ ಅವರ ಕಾರ್ಯಕ್ರಮಗಳನ್ನು ಆಯೋಜಿಸಬಾರದು. ಯಾವುದಾದರೂ ಕಾರ್ಯಕ್ರಮ ನಡೆಸಿದರೆ ಅದಕ್ಕೆ ಆಯೋಜಕರೇ ಹೊಣೆಗಾರರು ಆಗಬೇಕಾಗುತ್ತದೆ. ಮುಂದಾಗುವ ಪರಿಣಾಮ ಎದುರಿಸಲು ಸಿದ್ಧರಾಗಬೇಕೆಂದು ನಿರ್ಮಾಪಕ, ನಿರ್ದೇಶಕರಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮತ್ತಿತರ ಮುಖಂಡರು ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿ ದೂರು ನೀಡಿ, ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ.
