ಉದಯವಾಹಿನಿ, ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಸಲುವಾಗಿ ಸಮರ್ಪಕ ದತ್ತಾಂಶ ಸಂಗ್ರಹಿಸಲು ಇಂದಿನಿಂದ ಮನೆ ಮನೆ ಸಮೀಕ್ಷೆ ನಡೆಯುತ್ತಿದ್ದು, ಸಮುದಾಯಗಳು ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ಕುರಿತಂತೆ ವಿಧಾನಸೌಧದ ಸಮೇಳನ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌‍ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ಒಳಮೀಸಲಾತಿ ಜಾರಿಗೆ ನಮ ಸರ್ಕಾರ ಬದ್ಧವಾಗಿದೆ. ಈ ದಿಕ್ಕಿನಲ್ಲಿ ಇಂದಿನಿಂದ ಮಹತ್ವದ ಹೆಜ್ಜೆ ಇಟ್ಟಿದ್ದೇವೆ ಎಂದರು.
ಸಂವಿಧಾನದ 341ನೇ ವಿಧಿಯ ಅಡಿಯಲ್ಲಿ ಪರಿಶಿಷ್ಟ ಜಾತಿಪಟ್ಟಿಯಲ್ಲಿ 101 ಜಾತಿಗಳನ್ನು ಗುರುತಿಸಲಾಗಿದೆ. ಈ ಜಾತಿಗಳ ನಡುವೆ ಮೀಸಲಾತಿಯನ್ನು ವೈಜ್ಞಾನಿಕವಾಗಿ ವರ್ಗೀಕರಣ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್‌ ಕಳೆದ ವರ್ಷ ಆಗಸ್ಟ್‌ 1ರಂದು ನೀಡಿರುವ ತೀರ್ಪಿನಲ್ಲಿ ತಿಳಿಸಿದೆ.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌‍ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ನಮ ಸರ್ಕಾರ ರಚನೆ ಮಾಡಿದೆ. ಆಯೋಗ ಈಗಾಗಲೇ ಮಧ್ಯಂತರ ವರದಿ ನೀಡಿ, ಸಮರ್ಪಕ ದತ್ತಾಂಶ ಸಂಗ್ರಹಿಸುವ ಅಗತ್ಯವಿದೆ ಎಂದು ಹೇಳಿದೆ. ಹಲವು ಸಮುದಾಯಗಳ ಸಂಘಟನೆಗಳು ಇದೇ ಅಭಿಪ್ರಾಯವನ್ನು ಹೇಳಿವೆ.ಈ ಮೊದಲು 2011ರ ಜನಗಣತಿ ಆಧಾರದಲ್ಲಿ ಸದಾಶಿವ ಆಯೋಗ ಪರಿಶಿಷ್ಟ ಜಾತಿ ಸಮುದಾಯಗಳ ಜನಸಂಖ್ಯೆಯನ್ನು ಗುರುತಿಸಿತ್ತು. ಅದರಲ್ಲಿ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಸಮುದಾಯದಲ್ಲಿ ಯಾರು, ಎಷ್ಟು ಮಂದಿ ಇದ್ದಾರೆ ಎನ್ನುವುದು ಸ್ಪಷ್ಪವಾಗಿಲ್ಲ.ಎಡಗೈ, ಬಲಗೈ ಸಮುದಾಯದವರು ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಎಂಬ ವರ್ಗವನ್ನು ಸಾಮಾನ್ಯವಾಗಿ ಬಳಕೆ ಮಾಡುತ್ತಿದ್ದಾರೆೆ. ಗೊಂದಲಗಳನ್ನು ನಿವಾರಿಸಲು ಮೂಲ ಜಾತಿಯನ್ನು ಕರಾರುವಾಕ್ಕಾಗಿ ತಿಳಿಯಲು ಇಂದಿನಿಂದ ಮೇ 17ರವರೆಗೆ ಮನೆ ಮನೆಗೆ ಸಮೀಕ್ಷೆ ನಡೆಸಲಾಗುತ್ತಿದೆ. ಮೊದಲ ಹಂತದ ಸಮೀಕ್ಷೆಗೆ ಸುಮಾರು 65 ಸಾವಿರ ಶಿಕ್ಷಕರನ್ನು ನಿಯೋಜಿಸಲಾಗಿದೆ. 10-12 ಮಂದಿ ಶಿಕ್ಷಕರಿಗೆ ಒಬ್ಬ ಮೇಲ್ವಿಚಾರಕ ಇರುತ್ತಾರೆ ಎಂದರು.ಎರಡನೇ ಹಂತದಲ್ಲಿ ಮೇ 19ರಿಂದ 21ರ ನಡುವೆ ವಿಶೇಷ ಶಿಬಿರಗಳಲ್ಲಿ ಮಾಹಿತಿ ಕಲೆ ಹಾಕಲಾಗುವುದು. 3ನೇ ಹಂತದಲ್ಲಿ ಮೇ 19ರಿಂದ 22 ರವರೆಗೆ ಆನ್‌ಲೈನ್‌ ಮೂಲಕ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ. ಮೊದಲ ಹಂತದಲ್ಲಿ ಮಾಹಿತಿ ನೀಡಲು ಸಾಧ್ಯವಾಗದವರು ಎರಡು ಹಾಗೂ ಮೂರನೇ ಹಂತದಲ್ಲಿ ಮಾಹಿತಿ ನೀಡಬಹುದಾಗಿ ಎಂದರು.

Leave a Reply

Your email address will not be published. Required fields are marked *

error: Content is protected !!