ಉದಯವಾಹಿನಿ, ಬೆಂಗಳೂರು: ಕರಾವಳಿ ಪ್ರದೇಶದಲ್ಲಿ ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ, ಪೊಲೀಸರ ನಡೆ, ಸರ್ಕಾರದ ಧೋರಣೆ ಇದೇ ರೀತಿ ಮುಂದುವರೆದರೆ ಬಿಜೆಪಿ ಸರ್ಕಾರದ ಜನಪರವಾದ ಹೋರಾಟ ಮತ್ತಷ್ಟು ತೀವ್ರಸ್ವರೂಪ ಪಡೆಯಲಿದೆ ಎಂದು ಸರ್ಕಾರಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ನೇರ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನ ಹಾಗೂ ಬ್ರಹ್ಮಕಲಶೋತ್ಸವದ ಕುರಿತು ಭಾವುಕವಾಗಿ ಮಾತನಾಡಿರುವುದನ್ನೇ ಆಧರಿಸಿ ನೀಡಲಾಗಿರುವ ದೂರಿಗೆ ಎಫ್‌ಐಆರ್ ದಾಖಲಿಸಲಾಗಿದೆ.
ಈ ಮೂಲಕ ಸರ್ಕಾರ ಯಾರ ಪರ ಇದೆ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ವಿಜಯೇಂದ್ರ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಡಿನ ಕರಾವಳಿ ಪ್ರದೇಶದಲ್ಲಿ ಹಿಂದೂಗಳಿಗೆ ಆತಂಕ, ದುಗುಡ ತಪ್ಪುತ್ತಿಲ್ಲ.
ಮಂಗಳೂರಿನ ನಮ್ಮ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕಗ್ಗೋಲೆಯ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯನ್ನು ದಿಗ್ಧಮೆಗೊಳಿಸಿದೆ, ರಾಜ್ಯದ ಜನರು ಮತೀಯ ಶಕ್ತಿಗಳ ಅಟ್ಟಹಾಸದಿಂದ ಆತಂಕದಲ್ಲಿದ್ದಾರೆ. ಇದರ ನಡುವೆಯೇ ಮತ್ತೊಬ್ಬ ಹಿಂದೂ ಕಾರ್ಯಕರ್ತ ಭರತ್ ಕುಮೇಲು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ಮಾತ್ರ ತನ್ನ ನೈತಿಕ ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿದೆ. ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತೆಗೆದುಕೊಳ್ಳಲು ಯಾವುದೇ ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ, ಗೃಹ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗುವಂತೆ ಕಾಣದ ಪ್ರಭಾವಿ ಕೈ ಗಳು ಕೆಲಸ ಮಾಡುತ್ತಿರುವುದು ಸುಹಾಸ್ ಕೊಲೆ ಹಾಗೂ ನಂತರದ ಬೆದರಿಕೆಗಳ ಪ್ರಕರಣಗಳಿಂದ ಸ್ಪಷ್ಟವಾಗುತ್ತಿದೆ ಎಂದು ವಿಜಯೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!