ಉದಯವಾಹಿನಿ, ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ದಿನದಿಂದ ದಿನಕ್ಕೆ ಪರಿಸ್ಥಿತಿ ಉದ್ವಿಗ್ನಗೊಂಡು ಯಾವುದೇ ಕ್ಷಣದಲ್ಲಿ ಉಭಯ ರಾಷ್ಟ್ರಗಳ ನಡುವೆ ಯುದ್ಧ ಸಂಭವಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಂದ್ರ ರಕ್ಷಣಾ ಕಾರ್ಯದರ್ಶಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಭಾರೀ ಕುತೂಹಲ ಕೆರಳಿಸಿದೆ. ಏಪ್ರಿಲ್‌ 22 ರ ಪಹಲ್ಗಾಮ್‌ ದಾಳಿಯ ನಂತರ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ರಕ್ಷಣಾ ಕಾರ್ಯದರ್ಶಿ ರಾಜೇಶ್‌ ಕುಮಾರ್‌ ಸಿಂಗ್‌ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ವಿಶೇಷ ಎಂದರೆ. ಏರ್‌ ಸ್ಟಾಫ್‌ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ಎಪಿ ಸಿಂಗ್‌ ಮತ್ತು ನೌಕಾಪಡೆ ಮುಖ್ಯಸ್ಥ ಅಡಿರಲ್‌ ದಿನೇಶ್‌ ಕೆ ತ್ರಿಪಾಠಿ ಅವರು ಪ್ರಧಾನಮಂತ್ರಿ ಅವರನ್ನು ಭೇಟಿಯಾಗಿ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸನ್ನದ್ಧತೆಯ ಬಗ್ಗೆ ವಿವರಿಸಿದ ನಂತರ ಈ ಸಭೆ ನಡೆದಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಸೋಮವಾರ, ಪಾಕಿಸ್ತಾನ ಸೇನೆಯು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಜಮುವಿನ ಅಂತರರಾಷ್ಟ್ರೀಯ ಗಡಿಯಾದ್ಯಂತ ಹಲವಾರು ವಲಯಗಳಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಈ ಪ್ರದೇಶಗಳಲ್ಲಿ ಪಾಕಿಸ್ತಾನಿ ಪಡೆಗಳು ಅಪ್ರಚೋದಿತ ಸಣ್ಣ ಶಸಾ್ತ್ರಸ್ತ್ರಗಳ ಗುಂಡಿನ ದಾಳಿ ನಡೆಸುತ್ತಿವೆ ಎಂದು ಭಾರತೀಯ ಸೇನೆಯ ಹೇಳಿಕೆ ಆರೋಪಿಸಿದೆ. ಭಾರತೀಯ ಸೇನೆಯು ತಕ್ಷಣವೇ ಮತ್ತು ಪ್ರಮಾಣಾನುಗುಣವಾಗಿ ಪ್ರತಿಕ್ರಿಯಿಸಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತದೊಂದಿಗಿನ ದೇಶದ ಉದ್ವಿಗ್ನತೆಯನ್ನು ಶಮನ ಮಾಡಲು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್‌‍ ಅರಾಘ್ಚಿ ಸೋಮವಾರ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಪಾಕಿಸ್ತಾನಿ ಸಹವರ್ತಿ ಇಶಾಕ್‌ ದಾರ್‌ ಮತ್ತು ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್‌ ಷರೀಫ್‌ ಅವರನ್ನು ಭೇಟಿಯಾಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!