ಉದಯವಾಹಿನಿ, ಕೋಲಾರ: ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ನರೇಗಾ ಯೋಜನೆ ಒಂದು ವರದಾನವಾಗಿದ್ದು, ಸಿಇಓ ಪ್ರವೀಣ್ ಪಿ ಬಾಗೇವಾಡಿ ರವರು “ದುಡಿಯೋಣ ಬಾ” ಅಭಿಯಾನದ ಪ್ರಚಾರಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಚಾಲನೆ ನೀಡಿದ ನಂತರ ಮಾತನಾಡಿದ ಅವರು ಮಾನ್ಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶದಂತೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಇದೇ ಮೇ ತಿಂಗಳ ಒಂದನೇ ತಾರೀಖಿನಿಂದ ಗ್ರಾಮೀಣ ಭಾಗದ ಕೂಲಿಕಾರರಿಗೆ ೧೦೦ ದಿನಗಳ ಅಕುಶಲ ಕೆಲಸವನ್ನು ಒದಗಿಸುವ ಸಲುವಾಗಿ ವಿಶೇಷ “ದುಡಿಯೋಣ ಬಾ” ಅಭಿಯಾನದ ಪ್ರಚಾರವನ್ನು ಕೈಗೊಳ್ಳಲಾಗಿದೆ. ಹಾಗಾಗಿ ಜಿಲ್ಲೆಯ ೨೦೨೫-೨೬ ನೇ ಸಾಲಿನಲ್ಲಿ ಎಲ್ಲಾ ಅರ್ಹ ಕೂಲಿಕಾರರಿಗೆ ಕನಿಷ ೧೦೦ ದಿನಗಳಿಗೆ ಸರಾಸರಿ ೩೭೯ ರೂಗಳ ಕೂಲಿಯನ್ನು ನೀಡಿ ವಲಸೆಯನ್ನು ತಪ್ಪಿಸುವುದು ಈ ಅಭಿಯಾನದ ಗುರಿಯಾಗಿದೆ ಎಂದರು.
ಅಭಿಯಾನದಲ್ಲಿ ಹೊಸ ಉದ್ಯೋಗ ಚೀಟಿ ವಿತರಣೆ ಮಾಡಿ ಕೂಲಿಯನ್ನು ಒದಗಿಸುವುದು, ೧೦೦ ದಿನಗಳ ಕೂಲಿಯನ್ನು ಒದಗಿಸಿ ವಲಸೆಯನ್ನು ತಪ್ಪಿಸುವುದು ಹಾಗೂ ದುರ್ಬಲ ವರ್ಗದ ಕುಟುಂಬಗಳಿಗೆ ಕೂಲಿಯನ್ನು ಒದಗಿಸುವುದು ಅಭಿಯಾನದ ಪ್ರಮುಖ ಉದ್ದೇಶ ಆಗಿದೆ. ಅದೇ ರೀತಿಯಲ್ಲಿ ವಿಶೇಷ ಚೇತನರು ಮಹಿಳೆಯರು ಸೇರಿದಂತೆ ಲಿಂಗತ್ವ ಅಲ್ಪಸಂಖ್ಯಾತರಿಗೂ ಸವಲತ್ತುಗಳನ್ನು ನೀಡುವುದು ಆಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರತೀ ಗ್ರಾಮಗಳಿಗೂ ಆಟೋ ಮೈಕಿಂಗ್ ಮೂಲಕ ವ್ಯಾಪಕ ಪ್ರಚಾರ ಮಾಡಿ ಪರಿಣಾಮಕಾರಿಯಾಗಿ ಅನುಷನ ಮಾಡಲು ಆದೇಶ ಮಾಡಲಾಗಿದೆ ಎಂದು ತಿಳಿಸಿದರು
ಇದೇ ವೇಳೆ ಎಲ್ಲಾ ಗ್ರಾಮೀಣ ಭಾಗದ ಜನರು ಯೋಜನೆಯ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಇನ್ನೂ ಇದೇ ವೇಳೆ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ಶಿವಕುಮಾರ್. ಬಿ, ಯೋಜನಾ ನಿರ್ದೇಶಕರು-೧ ರಾದ ವೆಂಕಟಾಚಲಪತಿ.ಎಸ್, ಎಪಿಓ-೨ ರಾದ ಗೋವಿಂದಗೌಡ, ಇಓ ಮಂಜುನಾಥ್ ಬಿ.ಎಂ ಸೇರಿದಂತೆ ಎಲ್ಲಾ ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು.
