ಉದಯವಾಹಿನಿ, ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಿನ್ನೆಲೆಯಲ್ಲಿ, ವಿಮಾನ ಹೊರಡುವ ಸಮಯಕ್ಕಿಂತ ಮೂರು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣವನ್ನು ತಲುಪುವಂತೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಶುಕ್ರವಾರ ಪ್ರಯಾಣಿಕರಿಗೆ ಮನವಿ ಮಾಡಿದೆ.
ಭದ್ರತೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಲಹೆ ಮಾರ್ಗಸೂಚಿಯಲ್ಲಿ ಹೊಸ ಅಂಶವನ್ನು ಸೇರ್ಪಡೆ ಮಾಡಲಾಗಿದ್ದು, ತಪಾಸಣೆ ನಡೆಸುವ ನಿಟ್ಟಿನಲ್ಲಿ ಎಲ್ಲ ಪ್ರಯಾಣಿಕರು ವಿಮಾನ ಹೊರಡುವ ಮೂರು ಗಂಟೆಗೂ ಮುನ್ನವೇ ವಿಮಾನ ನಿಲ್ದಾಣಕ್ಕೆ ತಲುಪುವಂತೆ ಸೂಚಿಸಲಾಗಿದೆ.ದೇಶದಾದ್ಯಂತ ಹೆಚ್ಚಿದ ಭದ್ರತಾ ದೃಷ್ಟಿಯಿಂದಾಗಿ ಎಲ್ಲ ವಿಮಾನ ನಿಲ್ದಾಣಗಳಲ್ಲಿ ವರ್ಧಿತ ಸ್ಕ್ರೀನಿಂಗ್ ಕ್ರಮಗಳು ಜಾರಿಯಲ್ಲಿವೆ. ಸುಗಮ ಚೆಕ್-ಇನ್, ಭದ್ರತೆ ಮತ್ತು ಬೋರ್ಡಿಂಗ್‌ಗಾಗಿ ಪ್ರಯಾಣಿಕರು ವಿಮಾನ ನಿರ್ಗಮಿಸುವ ಕನಿಷ್ಠ ಮೂರು ಗಂಟೆಗೂ ಮುನ್ನವೇ ನಿಲ್ದಾಣಕ್ಕೆ ಆಗಮಿಸಲು ಸೂಚಿಸಲಾಗಿದೆ’ ಎಂದು ತಿಳಿಸಿದೆ.ಹೊಸ ಮಾರ್ಗಸೂಚಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ತಿಳಿಸಿದೆ.ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಎಲ್ಲ ವಿಮಾನಗಳಿಗೆ ದ್ವಿತೀಯ ಹಂತದ ಭದ್ರತಾ (ಸೆಕೆಂಡರಿ ಲ್ಯಾಡರ್ ಪಾಯಿಂಟ್) ತಪಾಸಣೆಯನ್ನು ಕಡ್ಡಾಯಗೊಳಿಸಿದೆ. ವಿಮಾನ ನಿಲ್ದಾಣಗಳ ಟರ್ಮಿನಲ್ ಕಟ್ಟಡಗಳಲ್ಲಿ ಸಂದರ್ಶಕರಿಗೆ ನಿಷೇಧ ಹೇರಲಾಗಿದೆ ಮತ್ತು ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!