ಉದಯವಾಹಿನಿ, ಬೆಂಗಳೂರು: ಪಾಕಿಸ್ತಾನದಿಂದ ಯುದ್ಧ ಸನ್ನಿವೇಶ ಸೃಷ್ಟಿಯಾಗುತ್ತಿದ್ದು, ರಾಜ್ಯ ಸರ್ಕಾರ ಅಗತ್ಯ ತಯಾರಿ ಮಾಡಿಕೊಳ್ಳುವ ಸಲುವಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗಳಿಗೆ ರಜೆ ನೀಡಲಾಗುತ್ತಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರಸ್ತುತ ದೇಶದಲ್ಲಿ ಸೂಕ್ಷ್ಮವಾತಾ ವರಣವಿದೆ. ಇದು ಯಾವಾಗ ಸಹಜ ಸ್ಥಿತಿಗೆ ಬರುತ್ತದೆ ಎಂಬುದು ಗೊತ್ತಿಲ್ಲ. ಅಲ್ಲಿಯವರೆಗೆ ನಾವು ಎಲ್ಲದಕ್ಕೂ ಸಿದ್ಧವಾಗಿರಬೇಕು. ಕಾನೂನು ಸುವ್ಯವಸ್ಥೆಗಿಂತ ಯುದ್ಧ ಸೇರಿದಂತೆ ಎಲ್ಲಾ ರೀತಿಯ ಸನ್ನಿವೇಶಕ್ಕೆ ಸನ್ನದ್ಧರಾಗುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿರುವುದು ಮುಖ್ಯವಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಭೆ ನಡೆಸಿ ಆಂತರಿಕ ಭದ್ರತೆಯನ್ನು ಪರಾಮರ್ಶಿಸಲಾಗುತ್ತಿದೆ. ಗೃಹ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ನಿನ್ನೆಯಿಂದ ಈಚೆಗೆ ಕೇಂದ್ರ ಸರ್ಕಾರದಿಂದ ಯಾವುದಾದರೂ ಸೂಚನೆಗಳು ಬಂದಿದ್ದರೆ, ಅದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡುತ್ತೇವೆ.ಕೇಂದ್ರ ಸರ್ಕಾರ ಬೇರೆ ರಾಜ್ಯಗಳ ನಾಗರಿಕರಿಗೆ ಕೆಲವು ಮಾರ್ಗಸೂಚಿಗಳನ್ನು ಕೊಟ್ಟಿದೆ. ಯಾವುದೇ ಸನ್ನಿವೇಶ ಎದುರಾಗುವ ಮುನ್ನ ಅಗತ್ಯ ತಯಾರಿ ಮಾಡಿಕೊಂಡಿದ್ದೇವೆ. ಆಹಾರ ಧಾನ್ಯ, ನೀರು, ಆಸ್ಪತ್ರೆ ತಯಾರಿ ಮಾಡಿಕೊಂಡಿದ್ದೇವೆ. ಅಂತಹ ಘಟನೆಗಳು ನಡೆದರೆ ಎದುರಿಸಲು ನಾವು ಸಿದ್ಧವಾಗಿರಬೇಕು ಎಂಬುದನ್ನು ಹೊರತುಪಡಿಸಿದರೆ, ಅಂತಹ ಸನ್ನಿವೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.ಸೂಕ್ಷ್ಮ ಸನ್ನಿವೇಶ ಇರುವುದರಿಂದ ಪೊಲೀಸರಿಗೆ ರಜೆ ಮಂಜೂರು ಮಾಡುವುದಕ್ಕೆ ಹೋಗುವುದಿಲ್ಲ. ಸದ್ಯಕ್ಕೆ ಯಾವುದೇ ರಜೆ ಇಲ್ಲ. ಪರಿಸ್ಥಿತಿ ಸಾಮಾನ್ಯಕ್ಕೆ ಬಂದಿರುವುದನ್ನು ಕೇಂದ್ರ ಸರ್ಕಾರ ನಮಗೆ ತಿಳಿಸುತ್ತದೆ. ಅಲ್ಲಿಯವರೆಗೂ ನಾವು ಸೂಕ್ಷ್ಮವಾಗಿರಬೇಕು ಎಂದರು. ಕರಾವಳಿ ಪ್ರದೇಶಗಳಲ್ಲಿ ಪರಿಸ್ಥಿತಿ ಬಿಗುವಿನಿಂದ ಇದೆ. ಆ ಕಾರಣಕ್ಕೆ ಮಂಗಳೂರು, ಉತ್ತರ ಕನ್ನಡ, ಉಡುಪಿ ಭಾಗಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ತುರ್ತು ಸಂದರ್ಭದಲ್ಲಿ ಪ್ರತಿಕ್ರಿಯಿಸಲು ಬೋಟ್‌ಗಳನ್ನು ಸಜ್ಜುಗೊಳಿಸಲಾಗಿದೆ. ನೌಕಾಪಡೆಯ ಜೊತೆಗೆ ಪೊಲೀಸರು ಸಿದ್ಧವಾಗಿದ್ದಾರೆ ಎಂದು ತಿಳಿಸಿದರು.
