ಉದಯವಾಹಿನಿ, ನವದೆಹಲಿ: ಆಪರೇಶನ್ ಸಿಂರ್ಧೂದ ಹೊಡೆತ ತಿನ್ನುತ್ತಿರುವ ನಡುವೆಯೇ ಪಾಕಿಸ್ತಾನ ರಾಜಧಾನಿ ಪ್ರದೇಶ ಇಸ್ಲಾಮಾಬಾದ್ ಆಡಳಿತವು ಮುಂದಿನ 48 ಗಂಟೆಗಳ ಕಾಲ ರಾಜಧಾನಿ ನಗರದೊಳಗಿನ ಎಲ್ಲಾ ಪೆಟ್ರೋಲ್ ಮತ್ತು ಡೀಸೆಲ್ ಕೇಂದ್ರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ತಕ್ಷಣದ ಆದೇಶ ಹೊರಡಿಸಿದೆ.
ಇಸ್ಲಾಮಾಬಾದ್ ಆಡಳಿತ ಹೊರಡಿಸಿದ ಅಧಿಕೃತ ಸೂಚನೆಯಲ್ಲಿ ನಿಖರ ಕಾರಣ ಉಲ್ಲೇಖಿಸದೇ, ಎಲ್ಲಾ ಪೆಟ್ರೋಲ್ ಪಂಪ್ಗಳನ್ನು ಕೂಡಲೇ ಮುಚ್ಚಬೇಕೆಂದು ಕಟ್ಟಾಜ್ಞೆ ಮಾಡಿದೆ. ಈ ಆದೇಶ ಶನಿವಾರ ಮುಂಜಾನೆ ಹೊರಡಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
48 ಗಂಟೆ ವರೆಗೆ ಇಸ್ಲಾಮಾಬಾದ್‌ನಲ್ಲಿ ಖಾಸಗಿ ವಾಹನಗಳು, ಸಾರ್ವಜನಿಕ ಸಾರಿಗೆ ಹಾಗೂ ವಾಣಿಜ್ಯ ವಾಹನಗಳಿಗೆ ಇಂಧನ ಲಭ್ಯವಾಗದೇ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದೆ. ಜೊತೆಗೆ ಈ ಬೆಳವಣಿಗೆ ಪಾಕ್ ಸರ್ಕಾರಕ್ಕೆ ಭಾರೀ ನಷ್ಟ ತಂದೊಡ್ಡುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಅಧಿಕೃತ ಅಧಿಸೂಚನೆಯಲ್ಲಿ ಈ ಕಠಿಣ ಕ್ರಮಕ್ಕೆ ಯಾವುದೇ ಕಾರಣವನ್ನು ತಿಳಿಸಲಾಗಿಲ್ಲ ಮತ್ತು ಅಧಿಕಾರಿಗಳು ತಕ್ಷಣವೇ ಯಾವುದೇ ಹೆಚ್ಚಿನ ವಿವರಗಳನ್ನು ನೀಡಿಲ್ಲ, ಒಂದು ಸಂಭಾವ್ಯ ಕಾರಣವೆಂದರೆ ಇಂಧನ ಪೂರೈಕೆಯ ಬಗ್ಗೆ ಇರುವ ಕಳವಳವಾಗಿರಬಹುದು ಎಂದು ಮೂಲಗಳು ತಿಳಿಸಿವೆ.

ಈ ಸಂಪೂರ್ಣ ಬಂದ್ ಆದೇಶ ತಕ್ಷಣದಿಂದ ಜಾರಿಗೆ ಬಂದಿದೆ. ಈ ಆದೇಶದ ಅವಧಿಯವರೆಗೆ ಇಸ್ಲಾಮಾಬಾದ್‌ನೊಳಗಿನ ಯಾವುದೇ ಖಾಸಗಿ ವಾಹನ, ಸಾರ್ವಜನಿಕ ಸಾರಿಗೆ ಅಥವಾ ವಾಣಿಜ್ಯ ಕಾರ್ಯಾಚರಣೆಗಳಿಗೆ ಯಾವುದೇ ಇಂಧನ ಲಭ್ಯವಿರುವುದಿಲ್ಲ. ಇದರಿಂದ ಜನರಲ್ಲಿ ಹಾಹಾಕಾರವೇ ಏಳುವ ನಿರೀಕ್ಷೆ ಇದೆ. ವಿದೇಶಿ ಮೀಸಲು ವಿನಿಮಯ ಸಂಗ್ರಹದಲ್ಲಿ ತೀವ್ರ ಕೊರತೆ ಹೊಂದಿರುವ ಪಾಕಿಸ್ತಾನದ ಬಳಿ ಗಲ್ಫ್ ರಾಷ್ಟ್ರಗಳಿಂದ ಇಂಧನ ಖರೀದಿಸಲೂ ಹಣವಿಲ್ಲದಾಗಿದೆ.

Leave a Reply

Your email address will not be published. Required fields are marked *

error: Content is protected !!