ಉದಯವಾಹಿನಿ, ಬೆಂಗಳೂರು: ವೈಟ್‌ಫೀಲ್ಡ್ ನ ಪ್ರಶಾಂತ್ ಲೇಔಟ್‌ನ ಪಿಜಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವಕನನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್‌ಗಢ ಮೂಲದ ಶುಭಾಂಶು ಶುಕ್ಲಾ  (೨೬ )ಬಂಧಿತ ಆರೋಪಿಯಾಗಿದ್ದಾನೆ. ನಗರದ ಸಾಫ್ಟ್‌ವೇರ್ ಕಂಪನಿಯೊಂದರ ಉದ್ಯೋಗಿಯಾಗಿದ್ದ ಆರೋಪಿಯು ಕಳೆದ ಮೇ ೯ರ ಮಧ್ಯರಾತ್ರಿ ೧೨.೩೦ ರ ಸಮಯದಲ್ಲಿ, ಪಿಜಿಯಲ್ಲಿದ್ದ ಇತರ ಯುವಕರು ‘ಆಪರೇಷನ್ ಸಿಂಧೂರ್’ ಯಶಸ್ಸನ್ನು ಸಂಭ್ರಮಿಸುತ್ತಿದ್ದ ವೇಳೆ ಬಾಲ್ಕನಿಯಲ್ಲಿ ನಿಂತು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದಾನೆ. ಪಾಕಿಸ್ತಾನ ಪರ ಘೋಷಣೆ ಕೇಳುತ್ತಿದ್ದಂತೆಯೇ, ಉಗ್ರರು ಇಲ್ಲಿಗೂ ಬಂದೇ ಬಿಟ್ಟರು ಎಂದು ಇತರ ಯುವಕರು ಭೀತಿಗೊಳಗಾಗಿದ್ದಾರೆ. ಪಿಜಿಯಲ್ಲಿದ್ದ ಇನ್ನಿತರ ಯುವಕರು ಭಯಗೊಂಡು ಹೊರಗೆ ಬಂದಾಗ, ಎರಡು ಮಂದಿ ಬಾಲ್ಕನಿಯಲ್ಲಿ ನಿಂತಿರುವುದು ಕಾಣಿಸಿದೆ. ಆ ಇಬ್ಬರಲ್ಲಿ ಒಬ್ಬನಾದ ಶುಭಾಂಶು ಪಾಕ್ ಪರ ಘೋಷಣೆ ಕೂಗುತ್ತಿದ್ದುದು ಕಾಣಿಸಿದೆ. ಎದುರಿನ ಪಿಜಿಯಲ್ಲಿದ್ದ ಯುವಕ ಈ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದ. ನಂತರ ಅಲ್ಲಿದ್ದ ಯುವಕರು ತುರ್ತು ಸಹಾಯವಾಣಿ ಸಂಖ್ಯೆ ೧೧೨ ಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಶುಭಾಂಶು ಪಾಕ್ ಪರ ಘೋಷಣೆ ಕೂಗಿದ್ದು ವಿಚಾರಣೆ ವೇಳೆ ದೃಢಪಟ್ಟಿದ್ದು, ವೈಟ್‌ಫೀಲ್ಡ್ ಠಾಣೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!