ಉದಯವಾಹಿನಿ, ಮೈಸೂರು : ಗ್ರೆಟರ್‌ ಬೆಂಗಳೂರನ್ನು ಕ್ವಾಟರ್‌ ಬೆಂಗಳೂರು ಎಂದು ಟೀಕೆ ಮಾಡುವ ವಿರೋಧ ಪಕ್ಷದ ನಾಯಕರು, ವಿಧಾನಮಂಡಲದಲ್ಲಿ ಮಸೂದೆಗೆ ಅಂಗೀಕಾರ ನೀಡಿದ್ದೇಕೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದಾರೆ. ಹುಟ್ಟು ಹಬ್ಬದ ಅಂಗವಾಗಿ ಕುಟುಂಬ ಸಮೇತರಾಗಿ ಕಬಿನಿ ಹಿನ್ನೀರು ಹಾಗೂ ಅರಣ್ಯ ಪ್ರದೇಶದಲ್ಲಿ ವಿರಮಿಸುತ್ತಿರುವ ಅವರು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಧಾನಸಭೆಯಲ್ಲಿ ಗ್ರೆಟರ ಬೆಂಗಳೂರು ಮಸೂದೆಯ ಬಗ್ಗೆ ಚರ್ಚೆ ನಡೆಯುವಾಗ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಕೂಡ ಭಾಗವಹಿಸಿ ಸಲಹೆ ನೀಡಿದ್ದಾರೆ. ಈಗ ಕ್ವಾಟರ್‌ ಬೆಂಗಳೂರು ಎನ್ನುತ್ತಿದ್ದಾರೆ. ವಿರೋಧ ಪಕ್ಷದವರಾಗಿ ಅವರು ಅಷ್ಟು ಮಾತನಾಡದಿದ್ದರೆ ಹೇಗೆ ಎಂದು ಮರು ಪ್ರಶ್ನಿಸಿದರು.
ಹಠ ಹಿಡಿದು ಗ್ರೆಟರ್‌ ಬೆಂಗಳೂರು ಘೋಷಣೆ ಮಾಡದಿದಂತೆ ರಾಮನಗರ ಜಿಲ್ಲೆಯ ವಿಷಯದಲ್ಲೂ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅದಕ್ಕಾಗಿ ಸಾಕಷ್ಟು ತಯಾರಿಗಳು ನಡೆದಿವೆ. ಶುಭ ಮೂಹೂರ್ತ, ಶುಭ ಗಳಿಗೆಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.
ಪಹಲ್ಗಾಮ್‌ ದಾಳಿ ವಿಷಯದಲ್ಲಿ ಇಡೀ ದೇಶವೇ ಒಟ್ಟಾಗಿ ನಿಂತಿದೆ. ಒಬ್ಬ ವ್ಯಕ್ತಿ ರಾಜಕೀಯ ಲಾಭ ಪಡೆದುಕೊಳ್ಳುವುದು ಸೂಕ್ತವಲ್ಲ. ವ್ಯಕ್ತಿಗಿಂತ ದೇಶ ಮುಖ್ಯ ಎಂಬುದು ಕಾಂಗ್ರೆಸ್‌‍ ನ ನಿಲುವು. ಪ್ರಧಾನಿಯವರ ಎಲ್ಲಾ ನಿರ್ಧಾರಗಳಿಗೆ ನಮ ಪಕ್ಷ ಬೆಂಬಲ ವ್ಯಕ್ತ ಪಡಿಸಿದೆ. ಬೇರೆ ಯಾವ ದೇಶದ ಒತ್ತಡಕ್ಕೂ ಭಾರತ ಮಣಿಯಬಾರದು ಎಂದು ಹೇಳಲಾಗುತ್ತಿದೆ ಎಂದರು.ಇತ್ತೀಚೆಗೆ ಹೊರಗಿನವರು ನಮ ಸ್ವಾಭಿಮಾನಕ್ಕೆ ಕೈ ಹಾಕುತ್ತಿದ್ದಾರೆ. ಇಂದಿರಾ ಗಾಂಧಿ ಕಾಲದಿಂದಲೂ ವಿದೇಶದವರಿಗೆ ನಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡಿರಲಿಲ್ಲ. ಈಗ ಅಮೆರಿಕಾ ಮಧ್ಯ ಪ್ರವೇಶಿಸುತ್ತಿದೆ. ಈ ವಿಚಾರವಾಗಿ ಚರ್ಚೆಯಾಗಬೇಕಿದೆ ಎಂದರು.
ಪ್ರಧಾನ ನರೇಂದ್ರ ಮೋದಿ ಕೂಡಲೇ ಸರ್ವ ಪಕ್ಷ ಸಭೆ ಮತ್ತು ಸಂಸತ್‌ ಅಧಿವೇಶನ ಕರೆದು ಚರ್ಚೆ ಮಾಡಬೇಕಿದೆ. ಸಂಸತ್‌ ಅಧಿವೇಶನ ಕರೆಯುವಂತೆ ಎಲ್ಲಾ ಸಂಸದರು ಸಹಿ ಹಾಕಿ ಒತ್ತಾಯ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!