ಉದಯವಾಹಿನಿ, ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಾಳೆ 92 ವಸಂತಗಳನ್ನು ಪೂರ್ಣಗೊಳಿಸಿ 93ನೇ ವರ್ಷಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಗೌಡರು ತಮ್ಮ ಹುಟ್ಟುಹಬ್ಬದ ಅಂಗವಾಗಿ ನಾಳೆ ಮುಂಜಾನೆ ತಿರುಮಲದ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯಲಿದ್ದಾರೆ. ಹೆಚ್ ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ತಿರುಪತಿಗೆ ಪ್ರಯಾಣ ಮಾಡಲಿದ್ದಾರೆ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡರು ಸೇರಿದಂತೆ ಅವರ ಕುಟುಂಬದ 20ಕ್ಕೂ ಹೆಚ್ಚು ಸದಸ್ಯರು ದೇವೇಗೌಡರೊಂದಿಗೆ ತಿರುಪತಿಗೆ ತೆರಳಲಿದ್ದಾರೆ. ತಿರುಮಲದಲ್ಲಿ ವಾಸ್ತವ್ಯ ಇರಲಿರುವ ಗೌಡರು ಮತ್ತು ಕುಟುಂಬದವರು ಮುಂಜಾನೆ ವೆಂಕಟೇಶ್ವರಸ್ವಾಮಿ ದರ್ಶನ ಪಡೆಯಲಿದ್ದಾರೆ. ನಂತರ ಅತಿಥಿಗೃಹವೊಂದನ್ನು ಉದ್ಘಾಟನೆ ಮಾಡಲಿದ್ದಾರೆ. ನಾಳೆ ಬೆಳಿಗ್ಗೆ ಗೌಡರು ಬೆಂಗಳೂರಿಗೆ ಮರಳುವ ಕಾರ್ಯಕ್ರಮವಿದೆ.
ಮೃತ್ಯುಂಜಯ ಹೋಮ:ದೇವೇಗೌಡರ 93ನೇ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರು ಮಹಾನಗರ ಜನತಾದಳ ಜೆಡಿಎಸ್ ಹಾಗೂ ಮಹಿಳಾ ವಿಭಾಗದ ವತಿಯಿಂದ ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನಾಳೆ ಬೆಳಿಗ್ಗೆ ದೇವೇಗೌಡರವರ ಹೆಸರಿನಲ್ಲಿ ಪೂಜೆ ಸಲ್ಲಿಸಿ ಮೃತ್ಯುಂಜಯ ಹೋಮವನ್ನು ನಡೆಸಲಾಗುತ್ತದೆ.ಈ ಪೂಜಾ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರ ಅಧ್ಯಕ್ಷರು, ವಿವಿಧ ವಿಭಾಗಗಳ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜೆಡಿಎಸ್ ಪ್ರಕಟಣೆ ತಿಳಿಸಿದೆ.
