ಉದಯವಾಹಿನಿ, ವಾಷಿಂಗ್ಟನ್ ಡಿಸಿ: ಅಮೆರಿಕದಲ್ಲಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ವಿರುದ್ಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತ ಟೆಕ್ ವಲಯದ ದಿಗ್ಗಜರನ್ನು ನೀಡಿದ್ದರೆ, ಪಾಕಿಸ್ತಾನ ಉಗ್ರರನ್ನು ನೀಡಿದೆ. ಕಡಿಮೆ ದರ್ಜೆಯ ಚೀನೀ ಶಸ್ತ್ರಾಸ್ತ್ರಗಳೊಂದಿಗೆ ತನ್ನನ್ನು ತಾನು ಶಸ್ತ್ರಸಜ್ಜಿತಗೊಳಿಸುವಾಗ ವಿದೇಶದಲ್ಲಿ ಸಂತ್ರಸ್ತನ ಆಟವನ್ನು ಪಾಕಿಸ್ತಾನ ಆಡುತ್ತಿದೆ ಎಂದು ಆರೋಪಿಸಿದ್ದಾರೆ.ಅಮೆರಿಕದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಪ್ರಧಾನಿ ನರೇಂದ್ರಮೋದಿ ವಿರುದ್ಧದ ಭುಟ್ಟೋ ಟೀಕೆಗಳಿಗೆ ನೇರ ಪ್ರತಿಕ್ರಿಯೆ ನೀಡಿದರು. ಇದು ಈ ಎರಡು ದೇಶಗಳ ನಡುವೆ ಇರಬಹುದಾದಷ್ಟು ವ್ಯತ್ಯಾಸವಾಗಿದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ಜಾಗತಿಕ ಮಾನ್ಯತೆ, ಮಿಲಿಟರಿ ಅವಲಂಬನೆಯನ್ನು ಅಣಕಿಸುವುದರೊದಿಗೆ ಭಾರತದ ಜಾಗತಿಕ ಸ್ಥಾನಮಾನವನ್ನು ಪ್ರತಿಪಾದಿಸಿದರು.
“ರಾಮ್ಜಿ ಯೂಸೆಫ್, 1993ರಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಬಾಂಬ್ ಹಾಕಿದ್ದ ಆರೋಪ, ಡೇವಿಡ್ ಕೋಲ್ಮನ್ ಹೆಡ್ಲಿ 26/11 ಪಿತೂರಿ ಆರೋಪವಿದೆ. ಇವರು ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದಾರೆ. ಈಗ ಭಾರತದ ಇಂದ್ರ ನೂಯಿ, ಸುಂದರ್ ಪಿಚೈ, ಅಜಯ್ ಬಂಗಾ, ಸತ್ಯ ನಾಡೆಲ್ಲಾ, ಕಾಶ್ ಪಟೇಲ್ ಅವರನ್ನು ನಾನು ಪರಿಚಯಿಸುವ ಅಗತ್ಯವಿಲ್ಲ. ಇದು ಅಮೆರಿಕಾದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ವ್ಯತ್ಯಾಸವಾಗಿದೆ. ಹೀಗಾಗಿ ಎರಡು ದಿನಗಳ ಟ್ರಿಪ್ ಗೆ ಬಂದಿರುವ ಭುಟ್ಟೋ, ಪಾಕಿಸ್ತಾನದ ಈ ಸಾಬೀತಾದ ದಾಖಲೆಯನ್ನು ಅಳಿಸಲು ಸಾಧ್ಯವಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
