ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರದಲ್ಲಿ 5 ವರ್ಷವೂ ಇರಬಹುದು, 10 ವರ್ಷವೂ ಇರಬಹುದು. ಸಿಎಂ ಬದಲಾವಣೆ ಹೈಕಮಾಂಡ್ಗೆ ಬಿಟ್ಟ ವಿಚಾರ. ಸದ್ಯ ಹೈಕಮಾಂಡ್ ಹಾಗೂ ಶಾಸಕರು ಸಿದ್ದರಾಮಯ್ಯ ಪರ ಇದ್ದಾರೆ,” ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆಯ ಬಗ್ಗೆ ಇಲ್ಲಿ ಬುಧವಾರ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ನೀವೇ ನವೆಂಬರ್ ಎಂದು ಸಮಯ ನಿಗದಿಪಡಿಸಿದ್ದೀರಾ? ಈಗ ಜೂನ್‌ನಲ್ಲಿದ್ದೇವೆ, ನವೆಂಬರ್ ಬರಲಿ ಆಗ ಮಾತನಾಡುತ್ತೇನೆ. ಹೈಕಮಾಂಡ್ ಹಾಗೂ ಶಾಸಕರ ಬೆಂಬಲ ಸಿದ್ದರಾಮಯ್ಯ ಹಾಗೂ ನಮ್ಮ ಸರ್ಕಾರದ ಮೇಲಿದೆ. ಯಾವ ವಿಚಾರ ಯಾವಾಗ ನಿರ್ಧರಿಸಬೇಕು ಎಂಬುದು ಹೈಕಮಾಂಡ್‌ಗೆ ಗೊತ್ತಿದೆ’ ಎಂದರು.

ಐದು ವರ್ಷವೂ ಕಾಂಗ್ರೆಸ್ ಸರ್ಕಾರ ಇರುತ್ತದೆ. ಈ ವಿಚಾರದ ಬಗ್ಗೆ ಹೆಚ್ಚು ಪ್ರಶ್ನೆ ಕೇಳಿ ನನ್ನನ್ನು ಸಿಲುಕಿಸಲು ಯತ್ನಿಸಬೇಡಿ. ನೀವು ಪ್ರಶ್ನೆ ಕೇಳಿದ್ದೀರಾ ನಾನು ಉತ್ತರಿಸಿದ್ದೇನೆ. ನನ್ನದೇ ಪ್ರಶ್ನೆ–ನನ್ನದೇ ಉತ್ತರ ಎಂಬಂತೆ ಬಿಂಬಿಸಬೇಡಿ ಎಂದು ಹೇಳಿದರು. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದಿದ್ದು, ಅಧಿಕಾರ ಹಸ್ತಾಂತರದ ಚರ್ಚೆಗಳು ಜೋರಾಗಿವೆ. ಇದೇ ಹೊತ್ತಲ್ಲಿ ಹಿರಿಯ ಸಚಿವ ಕೆಜೆ ಜಾರ್ಜ್‌ ಈ ಮಾತುಗಳನ್ನಾಡಿದ್ದಾರೆ.

ಡಿ.ಕೆ. ರವಿ ಪ್ರಕರಣದಲ್ಲೂ ನನ್ನ ಮೇಲೆ ಆರೋಪ ಮಾಡಿದ್ದರು. ಆಮೇಲೆ ಸಿಬಿಐ ವರದಿ ಏನೆಂದು ಬಂದಿತು? ನನ್ನ ಪಾತ್ರವೇ ಇಲ್ಲ ಎಂದು ಬಂತು. ಈಗ ಬಂದಿರುವ ಆರೋಪ‌ವೂ ಅಂಥಾದ್ದೇ. ಬಿಜೆಪಿಯವರು ನನ್ನ ಮೇಲೆಯೇ ಈ ರೀತಿ ಏಕೆ ಆರೋಪ ಮಾಡುತ್ತಾರೆಯೋ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. ನಾನು ಸಾಫ್ಟ್ ನಾಯಕನೇನಲ್ಲ. ಸೌಮ್ಯವಾಗಿ ಮಾತನಾಡುತ್ತೇನಷ್ಟೆ. ನಾನು ಯುವ ಕಾಂಗ್ರೆಸ್‌ ಅಧ್ಯಕ್ಷನಾಗಿದ್ದೆ. ಹಲವು ಇಲಾಖೆಗಳ ಜವಾಬ್ದಾರಿ ನಿರ್ವಹಿಸಿದ್ದೇನೆ. ನಾನು ಸಾಫ್ಟ್‌ ಆಗಿದ್ದರೆ ಇವೆಲ್ಲಾ ಆಗುತ್ತಿತ್ತಾ? ಎಂದು ಕೇಳಿದರು.

Leave a Reply

Your email address will not be published. Required fields are marked *

error: Content is protected !!