ಉದಯವಾಹಿನಿ, ಬಂಗಾರಪೇಟೆ : ಪುರಸಭೆಗೆ ಸಂಬ೦ಧಿಸಿದ೦ತೆ, ಮ್ಯಾನುವೆಲ್ ಖಾತೆಗಳಲ್ಲಿ ಹಾಗೂ ಇ-ಸ್ವತ್ತು ಖಾತೆಗಳಲ್ಲಿ ಭಾರಿ ಅಕ್ರಮ ವಹಿವಾಟು ನಡೆಯುತ್ತಿರುತ್ತದೆ. ಪ್ರಾಮಾಣಿಕವಾಗಿ ನೋಂದಣಿಯಾದ ಸ್ವತ್ತುಗಳಿಗೆ ಇ-ಖಾತೆಗಳನ್ನು ನೀಡುವಲ್ಲಿ ವರ್ಷಾನುಗಟ್ಟಲೆ ವಿಳಂಭದೋರಣೆ ಮಾಡುತ್ತಿರುವುದು ಹಾಗೂ ವರ್ಷಾನುಗಟ್ಟಲೆ ಇದ್ದ ಕಡತಗಳನ್ನು ಕಳೆದುಹಾಕಿ ಮತ್ತೆ ನೋಂದಣಿ ಪತ್ರದ ದಾಖಲೆಗಳನ್ನು ಮರು ನೀಡುವಂತೆ ಸಿಬ್ಬಂದಿಗಳು ಹೇಳುತ್ತಿರುವುದು ಸಮಂಜಸವಲ್ಲ ಎಂದು ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ಆಕ್ರೋಶ ವ್ಯಕ್ತಪಡಿಸಿ, ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಪಟ್ಟಣದ ಪುರಸಭೆ ಕಛೇರಿ ಮುಂಭಾಗ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇವೆ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡು ಮಾತನಾಡಿದ ಅವರು, ರೈತರು ಹಾಗೂ ಸಾರ್ವಜನಿಕರು ಪುರಸಭೆಯಲ್ಲಿ ಇ-ಸ್ವತ್ತು ಪಡೆಯಲು ಅರ್ಜಿ ನೀಡಿದಾಗ ಆ ವರ್ಷದ ಕಂದಾಯ ಪಾವತಿಸಬೇಕು, ಹಾಗೆ ಕಡತಗಳು ಕಳೆದು ಹಾಕಿದ ನಂತರ ಮತ್ತೆ, ಅರ್ಜಿ ನೀಡಿದಾಗ ಮತ್ತೊಂದು ಭಾರಿ ಕಂದಾಯ ಕಟ್ಟಬೇಕು, ಹೀಗೆ ಪ್ರತಿವರ್ಷದಂತೆ ೩-೪ ವರ್ಷ ಕಂದಾಯ ಪಾವತಿಸಿಕೊಂಡು ಇ-ಸ್ವತ್ತು ಖಾತೆ ಮಾಡಿಕೊಡದೆ ಮೀನಾಮೇಷ ಎಣಿಸುತ್ತಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿರುತ್ತದೆ. ಇಂತಹ ಘಟನೆಗಳು ಪ್ರತಿನಿತ್ಯ ಎದುರಾಗುತ್ತಿದ್ದು, ಈ ಬಗ್ಗೆ ಮುಖ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಪಿಐಡಿ ನಂಬರ್‌ಗಳನ್ನು ಇನ್ನೊಂದು ಬೇರೆ ಯಾರದ್ದೋ ಸ್ವತ್ತುಗಳಿಗೆ ನೊಂದಣಿ ಮಾಡಿ ಸಾರ್ವಜನಿಕರಿಂದ ಹಣ ಪೀಕುತ್ತಿರುವುದು ಕಾನೂನು ಬಾಹಿರ ಎಂದು ತಿಳಿದ್ದಿದ್ದರೂ ಒಂದೇ ಪಿಐಡಿ ನಂಬರ್ ಮತ್ತೊಬ್ಬರಿಗೆ ನೀಡುತ್ತಿರುವುದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
