ಉದಯವಾಹಿನಿ,ಲಂಡನ್: ಭಾರತ ಮೂಲದ ವ್ಯಕ್ತಿಯನ್ನು ಲಂಡನ್‌ನಲ್ಲಿ ಇರಿದು ಕೊಲೆ ಮಾಡಲಾಗಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 27 ವರ್ಷದ ಹೈದರಾಬಾದ್ ಯುವತಿಯನ್ನು ಆಕೆ ವಾಸಿಸುತ್ತಿದ್ದ ವಸತಿ ಸಂಕೀರ್ಣದಲ್ಲಿದ್ದ ಬ್ರೆಜಿಲ್‌ನ ವ್ಯಕ್ತಿಯೊಬ್ಬ ಇದೇ ರೀತಿ ಕೊಂದ ಮೂರೇ ದಿನದಲ್ಲಿ ಮತ್ತೊಂದು ಘಟನೆ ವರದಿಯಾಗಿದೆ. ಚಾಕುವಿನಿಂದ ಇರಿದ ಗಾಯಗಳೊಂದಿಗೆ 38 ವರ್ಷದ ಕೇರಳ ಮೂಲದ ಅರವಿಂದ್ ಶಶಿಕುಮಾರ್ ಪತ್ತೆಯಾಗಿದ್ದರು. ಕ್ಯಾಂಬೆರ್‌ವೆಲ್‌ನ ಸೌಂಥಾಂಪ್ಟನ್ ವೇನಲ್ಲಿರುವ ವಸತಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದಾಗಿ ಅಧಿಕಾರಿಗಳಿಗೆ ಕರೆ ಬಂದಿತ್ತು ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 1.31ರ ವೇಳೆಗೆ ಸಂತ್ರಸ್ತ ಅರವಿಂದ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಘಟನೆ ನಡೆದ ಮರುದಿನ ಶನಿವಾರ 25 ವರ್ಷದ ಸಲ್ಮಾನ್ ಸಲೀಂ ಎಂಬಾತನನ್ನು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ. ಆತನನ್ನು ಅದೇ ದಿನ ಕ್ರೋಯ್ಡಾನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜೂನ್ 20ರವರೆಗೂ ಓಲ್ಡ್ ಬೇಲಿಯಲ್ಲಿ ಕಸ್ಟಡಿಯಲ್ಲಿ ಇರಿಸಲಾಗಿದೆ. ಶುಕ್ರವಾರ ಪೋಸ್ಟ್ ಮಾರ್ಟಮ್ ಪರೀಕ್ಷೆ ನಡೆದಿದ್ದು, ಎದೆಗೆ ಚಾಕು ಇರಿತದಿಂದ ಅರವಿಂದ್ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಇವೆನಿಂಗ್ ಸ್ಟಾಂಡರ್ಡ್ ವರದಿ ಮಾಡಿದೆ.
