ಉದಯವಾಹಿನಿ, ಜೋಗಿ ಪ್ರೇಮ್ ( ನಿರ್ದೇಶನದ ಕೆಡಿ-ದ ಡೆವಿಲ್ ಸಿನಿಮಾದ ಸರ್ಸೆ ಸರ್ಸೆ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲ ಅವರಿಗೆ ಮಹಿಳಾ ಆಯೋಗ ಪತ್ರ ಬರೆದಿದೆ. ಸಿನಿಮಾದ ಈ ಹಾಡು ಅಶ್ಲೀಲವಾಗಿದೆ. ಮಹಿಳೆಯರ ಘನತೆಗೆ ಕುತ್ತು ಬರುತ್ತೆ ಎಂದು ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಹಾಡು ಬಿಡುಗಡೆಯಾಗಿತ್ತು. ಕನ್ನಡ ಮತ್ತು ಹಿಂದಿ ಹಾಡಿನಲ್ಲಿರುವ ಸಾಹಿತ್ಯದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ ಹಾಡಿನ ವಿರುದ್ಧ ದೆಹಲಿ ಮೂಲದ ವಕೀಲರೊಬ್ಬರು ಮುಂಬೈನಲ್ಲಿ ದೂರು ದಾಖಲಿಸಿದ್ದಾರೆ. ಸೈಬರ್ ಸೆಲ್ ದೂರು ಸಹ ದಾಖಲಾಗಿದೆ. ವಿವಾದ ತಾರಕ್ಕಕ್ಕೆ ಏರುತ್ತಿದ್ದಂತೆ ಹಿಂದಿ ಹಾಡನ್ನು ಯೂಟ್ಯೂಬ್‍ನಿಂದ ಕೆವಿಎನ್ ಪ್ರೊಡಕ್ಷನ್ ತೆಗೆದು ಹಾಕಿದೆ.
ಹಿಂದಿಯಲ್ಲಿ ‘ಸರ್ಕೆ ಚುನಾರ್’ ಎಂದು ಹಾಡು ಶುರುವಾಗುತ್ತದೆ. ಈ ಅಶ್ಲೀಲ ಮತ್ತು ಅಸಭ್ಯ ಹಾಡಿನ ಬಗ್ಗೆ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತೆ ವಿನೀತ್ ಜಿಂದಾಲ್ ದೂರು ನೀಡಿದ್ದಾರೆ. ದೂರಿನಲ್ಲಿ ನಟಿ ನೋರಾ ಫತೇಹಿ, ಸಂಜಯ್ ದತ್, ಹಿಂದಿ ಗೀತರಚನೆಕಾರ ರಕೀಬ್ ಆಲಂ ಮತ್ತು ಚಿತ್ರದ ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜೊತೆಗೆ ಹಾಡನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತೆಗೆದುಹಾಕಲು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
