
ಉದಯವಾಹಿನಿ, ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ಕಾರಣ. ಸಿಎಂ ಸಿದ್ದರಾಮಯ್ಯ ನೈತಿಕತೆ ಹೊತ್ತು ರಾಜೀನಾಮೆ ಕೊಡಬೇಕು ಸಂಸದ ಗೋವಿಂದ್ ಕಾರಜೋಳ ಆಗ್ರಹಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ದುರಂತಕ್ಕೆ ನೇರವಾಗಿ ಸರ್ಕಾರವೇ ಕಾರಣ. RCB ವಿಸ್ಕಿ ಮಾರಾಟದ ಕಂಪನಿ. ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಇಬ್ಬರೂ ಆರ್ಥಿಕ ಅಪರಾಧಿಗಳು. ಅಂತಹ ಕಂಪನಿಗಳನ್ನು ತಲೆ ಮೇಲೆ ಎತ್ತಿಕೊಂಡು ಸಿದ್ದರಾಮಯ್ಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.ಅಲ್ಲದೇ ವಿಜಯೋತ್ಸವ ವಿಚಾರದಲ್ಲಿ ಆಲೋಚನೆ ಮಾಡಿ ಸರ್ಕಾರ ಮುಂದುವರಿಯಬೇಕಿತ್ತು ಅಂತ ಸರ್ಕಾರದ ವಿರುದ್ದ ಕಾರಜೋಳ ಕಿಡಿಕಾರಿದ್ದಾರೆ.
ಏನಿದು ಪ್ರಕರಣ..?: ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಆದರೆ, ಆರ್‌ಸಿಬಿ ಫ್ಯಾನ್ಸ್ ಐತಿಹಾಸಿಕ ಕ್ಷಣದ ಸಂಭ್ರಮದಲ್ಲಿ ದುರಂತ ಸಂಭವಿಸಿದೆ. 10ಕ್ಕೂ ಹೆಚ್ಚು ಅಭಿಮಾನಿಗಳು ಸಾವನ್ನಪ್ಪಿ ಸೂತಕವಾಗಿ ಆಗಿಬಿಟ್ಟಿದೆ. ಪಂಜಾಬ್ ವಿರುದ್ಧ ಬೆಂಗಳೂರು 6 ರನ್‌ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿಯೇ ದೀಪಾವಳಿಯಂಥಹ ಸಂಭ್ರಮ ಇತ್ತು. ಇವತ್ತು ಇಡೀ ದಿನ ಹೆಚ್‌ಎಎಲ್ ಏರ್‌ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್‌ಸಿಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು.
