
ಉದಯವಾಹಿನಿ, ನವದೆಹಲಿ: ಜಮ್ಮು ಕಾಶ್ಮೀರದಲ್ಲಿರುವ ವಿಶ್ವದ ಅತಿ ಎತ್ತರದ ‘ಚೆನಾಬ್’ ರೈಲ್ವೆ ಸೇತುವೆಯನ್ನು ಮೋದಿ ಉದ್ಘಾಟಿಸಿದ್ದಾರೆ. ಚೆನಾಬ್ ಸೇತುವೆ ನಿರ್ಮಾಣ ಕಾರ್ಯದಲ್ಲಿ ಅನೇಕ ತಂತ್ರಜ್ಞರು ಕೊಡುಗೆ ನೀಡಿದ್ದಾರೆ. ಈ ಪೈಕಿ ಐಐಎಸ್‌ಸಿ ಪ್ರೊಫೆಸರ್ ಮಾಧವಿ ಲತಾ ಕೂಡ ಒಬ್ಬರು. ಚೆನಾಬ್ ನಿರ್ಮಾಣ ಕಾರ್ಯದಲ್ಲಿ ಮಾಧವಿ ಲತಾ 17 ವರ್ಷಗಳನ್ನು ಕಳೆದಿದ್ದಾರೆ. ಹೌದು, ಚೆನಾಬ್ ಸೇತುವೆ ನಿರ್ಮಾಣ ಕಾರ್ಯದಲ್ಲಿ ಮಾಧವಿ ಲತಾ ಅವರ ಕೊಡಗೆ ಅಪಾರವಾದದ್ದು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಪ್ರಾಧ್ಯಾಪಕರಾಗಿರುವ ಅವರು, ಚೆನಾಬ್ ಸೇತುವೆ ಯೋಜನೆಯಲ್ಲಿ ಭೂತಾಂತ್ರಿಕ ಸಲಹೆಗಾರರಾಗಿ 17 ವರ್ಷಗಳ ಕಾಲ ತೊಡಗಿಸಿಕೊಂಡಿದ್ದರು. ಈ ಸೇತುವೆ ರಚನೆಯ ಯೋಜನೆ, ವಿನ್ಯಾಸ ಮತ್ತು ನಿರ್ಮಾಣದಲ್ಲಿ ಭೂಪ್ರದೇಶದಿಂದ ಉಂಟಾಗುವ ಅಡೆತಡೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದರು.
ಮಾಧವಿ ಲತಾ 1992ರಲ್ಲಿ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಬಿ.ಟೆಕ್ ಪದವಿ ಗಳಿಸಿದರು. ನಂತರ ತೆಲಂಗಾಣದ ವಾರಂಗಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಭೂತಾಂತ್ರಿಕ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ವಿದ್ಯಾರ್ಥಿನಿಯಾಗಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಅಲ್ಲದೇ 2000ನೇ ಇಸವಿಯಲ್ಲಿ ಐಐಟಿ ಮದ್ರಾಸ್‌ನಿಂದ ಜಿಯೋಟೆಕ್ನಿಕಲ್ ಎಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
