ಉದಯವಾಹಿನಿ, ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಈಗ ಬಿಹಾರದಲ್ಲಿ ನಡೆಯಬಹುದು. ಹಾಗೂ ಬಿಜೆಪಿ ಸೋಲುವಲ್ಲೆಲ್ಲಾ ಮ್ಯಾಚ್ ಫಿಕ್ಸಿಂಗ್ ನಡೆಯಬಹುದು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರು ಶನಿವಾರ ಮತ್ತೆ ಎನ್‌ಡಿಎ ನೇತೃತ್ವದ ಬಿಜೆಪಿ ಚುನಾವಣಾ ಅಕ್ರಮಗಳಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ಕಳೆದ ವರ್ಷ ಮಹಾರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ. ಇದು ಬಿಹಾರಕ್ಕೂ ಬರಬಹುದು. ಈ ರೀತಿ ಮ್ಯಾಚ್ ಫಿಕ್ಸಿಂಗ್ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಬುಡಮೇಲು ಮಾಡಲು ಮ್ಯಾಚ್ ಫಿಕ್ಸಿಂಗ್ ಮಾದರಿಯನ್ನು ಬಳಸಿದೆ ಎಂದು ಆರೋಪಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ʻಮ್ಯಾಚ್ ಫಿಕ್ಸಿಂಗ್ ಮಹಾರಾಷ್ಟ್ರʼ ಶೀರ್ಷಿಕೆಯಲ್ಲಿ ಪ್ರಕಟವಾದ ಲೇಖನವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮಹಾರಾಷ್ಟ್ರ ಚುನಾವಣಾ ಫಲಿತಾಂಶದಲ್ಲಿ ಮ್ಯಾಚ್ ಫಿಕ್ಸಿಂಗ್ ಹೇಗೆ ನಡೆಯಿತು? ಎಂಬುದನ್ನು ಹಂತ-ಹಂತವಾಗಿ ವಿವರಿಸಿದ್ದಾರೆ.
