ಉದಯವಾಹಿನಿ, ಪಾಟ್ನಾ : ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಬಾಲಕಿಯೊಬ್ಬಳನ್ನು ಹತ್ಯೆಗೈದು, ಸೂಟ್‌ಕೇಸ್‌ನಲ್ಲಿ ಶವ ತುಂಬಿ ಎಸೆದಿದ್ದ 7 ಜನ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ. ಬಂಧಿತ ಎಲ್ಲಾ ಆರೋಪಿಗಳು ಬಿಹಾರದ ನವಾಡ ಜಿಲ್ಲೆಯವರಾಗಿದ್ದಾರೆ. ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ವಿಭಾಗದ ಸೂರ್ಯನಗರ ಪೊಲೀಸರು ಬಿಹಾರದಿಂದ ಕರ್ನಾಟಕಕ್ಕೆ ಕರೆತರುತ್ತಿದ್ದಾರೆ. 7 ರಲ್ಲಿ ಮೂವರ ವಿವರ ಲಭ್ಯವಾಗಿದ್ದು, ಅವರನ್ನು ಆಶಿಕ್ ಕುಮಾರ್, ಮುಖೇಶ್ ಮತ್ತು ರಾಜಾರಾಮ್ ಮೋಹನ್ ಎಂದು ಗುರುತಿಸಲಾಗಿದೆ. ಆಶಿಕ್ ಕುಮಾರ್ ವಿವಾಹಿತನಾಗಿದ್ದು, ಆತನಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ರೈಲ್ವೆ ಪೊಲೀಸರ ವ್ಯಾಪ್ತಿಗೆ ಬರುತ್ತದೆ. ಘಟನೆ ನಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ನಮಗೆ ಸಂಬಂಧಿಸಿರಬಹುದು ಎಂಬ ಕಾರಣಕ್ಕೆ ನಾವು ಭಾಗಿಯಾಗಿದ್ದೇವೆ. ಸೂಟ್‌ಕೇಸ್‌ನಲ್ಲಿ ಶವ ಮಾತ್ರ ಇತ್ತು. ಯಾವುದೇ ಗುರುತಿನ ಚೀಟಿ ಅಥವಾ ವೈಯಕ್ತಿಕ ವಸ್ತುಗಳು ಪತ್ತೆಯಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
