ಉದಯವಾಹಿನಿ, ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಭೀಕರ ಕಾಲ್ತುಳಿತ ಪ್ರಕರಣದ ಸಿಐಡಿ ತನಿಖೆ ಇಂದು ಆರಂಭವಾಗಿದೆ. ಎಸ್‌ಪಿ ಶುಭನ್ವಿತಾ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಡಿವೈಎಸ್‌ಪಿ ಗೌತಮ್ ಹಾಗೂ ಪುರುಷೋತ್ತಮ್ ಅವರನ್ನು ತನಿಖಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಈಗಾಗಲೇ ಕೇಸ್ ಫೈಲನ್ನು ಕಬ್ಬನ್ ಪಾರ್ಕ್ ಪೊಲೀಸರು ಸಿಐಡಿಗೆ ವರ್ಗಾವಣೆ ಮಾಡಿದ್ದಾರೆ. ಕಾಲ್ತುಳಿತ ಉಂಟಾದ ಸ್ಥಳಕ್ಕೆ ಸಿಐಡಿ ತಂಡ ಭೇಟಿ ನೀಡಲಿದೆ.
ನೂಕು ನುಗ್ಗಲು ಉಂಟಾಗಿದ್ದ ಗೇಟ್ ನಂಬರ್ 7, 19,18, 16, 21ರ ಬಳಿ ಸಿಐಡಿ ತಂಡ ಪರಿಶೀಲನೆ ನಡೆಯಲಿದೆ. ಘಟನಾ ಸ್ಥಳ ಪರಿಶೀಲನೆ ಬಳಿಕ ಆರೋಪಿಗಳನ್ನ ಕಸ್ಟಡಿಗೆ ಪಡೆಯಲು ಸಿಐಡಿ ತಂಡ ತಯಾರಿ ನಡೆಸಲಿದೆ. ಬಹುತೇಕ ಸೋಮವಾರ ಬಾಡಿ ವಾರೆಂಟ್ ಮೇಲೆ ಬಂಧಿತ ನಾಲ್ವರು ಆರೋಪಿಗಳನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಶನಿವಾರ ಸರ್ಕಾರಿ ರಜೆ ಮತ್ತು ನಾಳೆ ಭಾನುವಾರವಾದ್ದರಿಂದ ನ್ಯಾಯಾಲಯಕ್ಕೆ ರಜೆ ಇದ್ದು, ಸೋಮವಾರ ಕಸ್ಟಡಿಗೆ ಪಡೆಯಲು ಸಿದ್ಧತೆ ನಡೆದಿದೆ. ಜೂ.4 ರಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್‌ಸಿಬಿ (RCB) ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿದಲ್ಲಿ (Stampede) 11 ಜನ ಮೃತಪಟ್ಟಿದ್ದರು. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾಗರೋಪಾದಿಯಲ್ಲಿ ಜನ ನೆರೆದಿದ್ದರು. ಜನರಲ್ಲಿ ನೂಕುನುಗ್ಗಲಿಂದ ಕಾಲ್ತುಳಿತ ಉಂಟಾಗಿ ದುರಂತ ಸಂಭವಿಸಿತ್ತು. ಈ ಘಟನೆ ಬೆನ್ನಲ್ಲೇ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಹೈಕೋರ್ಟ್ ಸುಮೋಟೋ ಕೇಸ್ ದಾಖಲಿಸಿಕೊಂಡಿತ್ತು.
