ಉದಯವಾಹಿನಿ, ನವದೆಹಲಿ: ಭಾರತ, ಚೀನಾ, ಬ್ರೆಜಿಲ್, ರಷ್ಯಾ ಒಳಗೊಂಡಿರುವ ʻಬ್ರಿಕ್ಸ್ʼ ಒಕ್ಕೂಟದ 10 ರಾಷ್ಟ್ರಗಳು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿವೆ. ಅಲ್ಲದೇ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ನಿರ್ಧರಿಸಿದ್ದು, ಭಾರತಕ್ಕೆ ಬೆಂಬಲ ಸೂಚಿಸಿವೆ. ಇದು ಭಾರತಕ್ಕೆ ಸಿಕ್ಕ ಮತ್ತೊಂದು ರಾಜತಾಂತ್ರಿಕ ಯಶಸ್ಸಾಗಿದೆ.
ಭಾರತ ಸೇರಿದಂತೆ 10 ʻಬ್ರಿಕ್ಸ್ʼ ಸದಸ್ಯ ರಾಷ್ಟ್ರಗಳ ಸಂಸತ್ ಪ್ರತಿನಿಧಿಗಳು ಇದೇ ಜೂ.4-5ರಂದು ಬ್ರೆಲಿಯಾದಲ್ಲಿ ನಡೆದ 11ನೇ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದರು. ಬ್ರಿಕ್ಸ್ ಸಂಸದೀಯ ವೇದಿಕೆಯಲ್ಲಿ ಭಾರತ, ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್, ಇಥಿಯೋಪಿಯಾ ಮತ್ತು ಇಂಡೋನೇಷ್ಯಾ ಸಂಸತ್ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನೇತೃತ್ವದ ಭಾರತೀಯ ಸಂಸದೀಯ ನಿಯೋಗವು ಬ್ರೆಸಿಲಿಯಾದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಭಾಗಿಯಾಗಿ, ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟವನ್ನು ಪ್ರತಿಪಾದಿಸಿತು.
