ಉದಯವಾಹಿನಿ, ಬೆಂಗಳೂರು: ಕಾಲ್ತುಳಿತದ ಘಟನೆಗೆ ಮುನ್ನ ಪೊಲೀಸರು ನೀಡಿದ ಸೂಚನೆಗಳನ್ನು ಕಾಂಗ್ರೆಸ್ ಸರ್ಕಾರ ಉಲ್ಲಂಘಿಸಿದೆ. ಈ ಮೂಲಕ ಸರ್ಕಾರವೇ ಕಾನೂನು ಮೀರಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಶಕ್ತಿಗಳ ತಿಕ್ಕಾಟ ಇಲ್ಲದಿದ್ದರೆ ವಿದ್ಯಾರ್ಥಿಗಳು ಸಾಯುತ್ತಿರಲಿಲ್ಲ. ಅವರ ಕುಟುಂಬದವರಿಗೆ ಸಾಂತ್ವನ ಹೇಳಬೇಕಿದ್ದವರು ಕಪ್‌ಗೆ ಮುತ್ತಿಡುತ್ತಿದ್ದರು. ಮಧ್ಯಾಹ್ನವೇ ಮೊದಲ ಸಾವಾದಾಗ ಪೊಲೀಸರು ಮಾಹಿತಿ ನೀಡಿದ್ದರು. ಕಾರ್ಯಕ್ರಮ ಆರಂಭವಾದಾಗಲೇ 8 ಮಕ್ಕಳು ಸತ್ತಿದ್ದರು. ಆ ನಂತರವೂ ಕಾರ್ಯಕ್ರಮ ಮಾಡುತ್ತಾರೆಂದರೆ ಇವರೆಲ್ಲರೂ ಕಟುಕ, ಕಲ್ಲಿನ ಹೃದಯದವರು ಎಂದು ದೂರಿದರು.
ಕಾನೂನನ್ನು ಪೊಲೀಸ್ ಅಧಿಕಾರಿಗಳು ಜಾರಿ ಮಾಡುತ್ತಾರೆ. ಜೂನ್ 4 ರಂದು ವಿಧಾನಸೌಧದ ಪೊಲೀಸರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಆತುರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಹಾಗೂ ಸಿಬ್ಬಂದಿ ಕೊರತೆ ಇರುವುದರಿಂದ ಬಂದೋಬಸ್ತ್ ಕರ್ತವ್ಯಕ್ಕೆ ತೊಂದರೆಯಾಗಲಿದೆ ಎಂದು ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ಆಗ ಕಾನೂನು ಪುಸ್ತಕ ತೋರಿಸಿದ್ದರು. ಈಗ ಸರ್ಕಾರವೇ ಕಾನೂನು ಉಲ್ಲಂಘಿಸಿದೆ ಎಂದು ಆಕ್ರೋಶ ಹೊರಹಾಕಿದರು
