ಉದಯವಾಹಿನಿ,ಇಸ್ಲಾಮಾಬಾದ್: ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಪ್ರತ್ಯುತ್ತರವಾಗಿ ಭಾರತದ ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದೇವೆಂದು ಸುಳ್ಳು ಹೇಳಿ ಜಗತ್ತಿನ ಮುಂದೆ ಪಾಕಿಸ್ತಾನ ಮತ್ತೆ ಬೆತ್ತಲಾಗಿದೆ. ಭಾರತದ ವಿರುದ್ಧದ ಸಂಘರ್ಷದಲ್ಲಿ ತಾನು ಗೆದ್ದಿದ್ದೇನೆ ಎಂದು ಜಗತ್ತನ್ನು ನಂಬಿಸಲು ಪಾಕಿಸ್ತಾನ ಶತಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ, ನಕಲಿ ಉಪಗ್ರಹ ಚಿತ್ರಗಳು, ನಕಲಿ ದೃಶ್ಯಗಳು ಮತ್ತು ತಪ್ಪು ಮಾಹಿತಿ ಪಾಕ್ ಹರಡುತ್ತಿದೆ. ಆಪರೇಷನ್ ಸಿಂಧೂರ ನಂತರ, ಪಾಕಿಸ್ತಾನವು ಪಂಜಾಬ್‌ನ ಆದಂಪುರ ವಾಯುನೆಲೆಯಲ್ಲಿ ನಿಲ್ಲಿಸಲಾಗಿದ್ದ ಸುಖೋಯ್-30ಎಂಕೆಐ ಅನ್ನು ಹೊಡೆದುರುಳಿಸಿ, ಗುಜರಾತ್‌ನ ಭುಜ್ ವಾಯುನೆಲೆಯಲ್ಲಿ ಎಸ್-400 ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ಘಟಕವನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿತ್ತು. ಅದೇ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಪಾಕ್ ಸುಳ್ಳು ಹೇಳುತ್ತಿದೆ ಎಂಬುದನ್ನು ಪ್ರಧಾನಿ ನಿರೂಪಿಸಿದರು. ಈ ಬೆಳವಣಿಗೆಯಿಂದ ಪಾಕ್‌ಗೆ ತೀವ್ರ ಮುಖಭಂಗವಾಯಿತು.
