ಉದಯವಾಹಿನಿ, ವಾಷಿಂಗ್ಟನ್: ಭಾರತೀಯ ವಿದ್ಯಾರ್ಥಿ ಕೈಗೆ ಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ ಗಡೀಪಾರು ಮಾಡಿರುವ ಘಟನೆ ನಡೆದಿದೆ.ನ್ಯೂಜೆರ್ಸಿಯ ನ್ಯೂವಾರ್ಕ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಗಡೀಪಾರು ಮಾಡುವ ಮೊದಲು ಅಧಿಕಾರಿಗಳು ಕೈಕೋಳ ಹಾಕಿ ನೆಲಕ್ಕೆ ಒತ್ತುವ ವೀಡಿಯೊಗಳು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಾಕ್ಷಿ ಮತ್ತು ಭಾರತೀಯ-ಅಮೆರಿಕನ್ ಉದ್ಯಮಿ ಕುನಾಲ್ ಜೈನ್ ಎಂಬವರು ವೀಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ, ಅಧಿಕಾರಿಗಳು ವಿದ್ಯಾರ್ಥಿಯನ್ನು ಅಪರಾಧಿಯಂತೆ ನಡೆಸಿಕೊಳ್ಳುತ್ತಿರುವುದನ್ನು ತೋರಿಸಲಾಗಿದೆ.
ಈ ಮನಕಲಕುವ ದೃಶ್ಯಾವಳಿಯಲ್ಲಿ ಅಮೆರಿಕದ ಪೊಲೀಸರು ವಿದ್ಯಾರ್ಥಿಯನ್ನು ನೆಲಕ್ಕೆ ಒತ್ತುತ್ತಿರುವುದು ಕಂಡುಬಂದಿದೆ. ನಾಲ್ವರು ಅಧಿಕಾರಿಗಳು ಆತನನ್ನು ಹಿಡಿದಿಟ್ಟುಕೊಂಡಿದ್ದಾರೆ. ಅವರಲ್ಲಿ ಇಬ್ಬರು ತಮ್ಮ ಮೊಣಕಾಲುಗಳನ್ನು ವಿದ್ಯಾರ್ಥಿ ಬೆನ್ನಿನ ಮೇಲೆ ಇಟ್ಟುಕೊಂಡಿದ್ದಾರೆ. ವಿದ್ಯಾರ್ಥಿಯ ಕಾಲುಗಳು ಮತ್ತು ಕೈಗಳನ್ನು ಕಟ್ಟಿ ಹಾಕಿದ್ದಾರೆ.
