ಉದಯವಾಹಿನಿ, ಹೊಸಕೋಟೆ : ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಂಧ್ರಪ್ರದೇಶದ ಕೇಶವಲುರೆಡ್ಡಿ (44),ತುಳಸಿ ಅಲಿಯಾಸ್ ತನು (21), ಹನ್ನೊಂದು ತಿಂಗಳ ಮಗು ಯತಿಕ್ ಮತ್ತು ತಿರುಪತಿಯ ಪ್ರಗತಿ (4) ಮೃತಪಟ್ಟ ದುರ್ದೈವಿಗಳು.
ಆಂಧ್ರಸಾರಿಗೆ ಬಸ್ ತಿರುಪತಿಯಿಂದ ರಾತ್ರಿ ಬೆಂಗಳೂರಿಗೆ ಪ್ರಯಾಣಿಸುತ್ತಿತ್ತು. ಇಂದು ಮುಂಜಾನೆ 2 ಗಂಟೆ ಸುಮಾರಿನಲ್ಲಿ ಈ ಬಸ್ ಕೋಲಾರ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದಾಗ ತಾಲ್ಲೂಕಿನ ಗೊಟ್ಟಿಪುರ ಗೇಟ್ ಬಳಿ ಮುಂದೆ ತೆರಳುತ್ತಿದ್ದ ಲಾರಿಯನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಬಸ್ ಚಾಲಕ ಮುನ್ನುಗ್ಗಿದ್ದಾನೆ. ಆ ವೇಳೆ ಲಾರಿಗೆ ಹಿಂದಿನಿಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
