ಉದಯವಾಹಿನಿ, ಬೆಂಗಳೂರು: ದ್ವೇಷ ಭಾಷಣಗಳ ವಿರುದ್ಧ ಪೊಲೀಸ್ ಅಧಿಕಾರಿಗಳ ಕ್ರಮದಲ್ಲಿನ ಅಸಮರ್ಪಕತೆಯ ಬಗ್ಗೆ ತನಿಖೆ ನಡೆಸುವಂತೆ ಸ್ಪೀಕರ್ ಯು.ಟಿ ಖಾದರ್ ಅವರು ಗೃಹ ಸಚಿವ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ರಾಜ್ಯದ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ದ್ವೇಷಭರಿತ ಭಾಷಣಗಳು, ಪ್ರಚೋದನಾತ್ಮಕ ಹೇಳಿಕೆಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಸಮಾಜ ಘಾತುಕ ವದಂತಿಗಳು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಾರೀ ಧಕ್ಕೆ ಉಂಟುಮಾಡುವಂತಹ ಅಪಾಯಕಾರಿ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿವೆ. ಈ ಗಂಭೀರ ಬೆಳವಣಿಗೆಯನ್ನು ನಾನು ಈ ಪತ್ರದ ಮೂಲಕ ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ ಎಂದಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಈ ಹಿಂದಿನ ಕೆಲವು ಪೊಲೀಸ್ ಅಧಿಕಾರಿಗಳು ಈ ದ್ವೇಷ ಭಾಷಣ, ಪ್ರಚೋದನಕಾರಿ ಹೇಳಿಕೆಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಸಮಾಜ ಘಾತುಕ ವದಂತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೇ ಅಸಹಾಯಕತೆ ಅಥವಾ ನಿರ್ಲಕ್ಷ್ಯ ವಹಿಸಿದ್ದಾರೆ. ಆದರೆ ಈಗಿನ ಪೊಲೀಸ್ ಅಧಿಕಾರಿಗಳು ದ್ವೇಷ ಭಾಷಣದ ವಿರುದ್ಧ ಸಮರ್ಪಕ ಹಾಗೂ ತ್ವರಿತ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
