ಉದಯವಾಹಿನಿ, ಚಂಡೀಗಢ: ಕತ್ತು ಸೀಳಿ ಖ್ಯಾತ ಮಾಡೆಲ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ರೂಪದರ್ಶಿಯ ಬಾಯ್‌ಫ್ರೆಂಡ್‌ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸುನಿಲ್ ಎಂದು ಗುರುತಿಸಲಾಗಿದೆ. ಮೃತ ಶೀತಲ್ ಸಂಗೀತ ಉದ್ಯಮದಲ್ಲಿ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಳು. ಆಕೆಗೆ ಸುನಿಲ್ ಬಾಯ್‌ಫ್ರೆಂಡ್ ಆಗಿದ್ದ ಎನ್ನಲಾಗಿದೆ. ಸಂತ್ರಸ್ತೆಯ ಸಹೋದರಿ ನೇಹಾ ಮಾತಾನಾಡಿ, ಶೀತಲ್ ಹಾಗೂ ನಾನು ಜೊತೆ ಪಾಣಿಪತ್‌ನಲ್ಲಿ ವಾಸಿಸುತ್ತಿದ್ದೆವು. ಜೂ.14ರಂದು ಶೀತಲ್ ಮಾಡೆಲ್ ಶೂಟಿಂಗ್‌ಗಾಗಿ ಅಹರ್ ಗ್ರಾಮಕ್ಕೆ ತೆರಳಿದ್ದರು. ಆ ಸಮಯದಲ್ಲಿ ಶೀತಲ್ ನನಗೆ ಕರೆ ಮಾಡಿ, ಸುನಿಲ್ ನನ್ನ ಮೇಲೆ ದೈಹಿಕ ದೌರ್ಜನ್ಯ ಎಸಗುತ್ತಿದ್ದಾನೆ ಹಾಗೂ ಬಲವಂತವಾಗಿ ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಿದ್ದಳು. ಸ್ವಲ್ಪ ಸಮಯದ ಬಳಿಕ ಶೀತಲ್‌ಗೆ ಮತ್ತೆ ಕರೆ ಮಾಡಿದಾಗ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ರಾತ್ರಿಯಾದರೂ ಮನೆಗೆ ಬರದಿದ್ದಾಗ ಕಾಣೆಯಾಗಿರುವುದಾಗಿ ದೂರು ನೀಡಿದೆ ಎಂದು ಹೇಳಿಕೊಂಡಿದ್ದಾರೆ.
ಆರು ತಿಂಗಳ ಹಿಂದೆ ಶೂಟಿಂಗ್ ಸಮಯದಲ್ಲಿ ಕರ್ನಾಲ್‌ನ ಮಾಡೆಲ್ ಟೌನ್‌ನಲ್ಲಿರುವ ಸುನಿಲ್ ಮಾಲೀಕತ್ವದ ಹೋಟೆಲ್‌ನಲ್ಲಿ ಶೀತಲ್ ತಂಗಿದ್ದಳು. ಆಗ ಶೀತಲ್ ಹಾಗೂ ಸುನಿಲ್ ಮಧ್ಯೆ ಸ್ನೇಹ ಬೆಳೆದಿತ್ತು. ಶೀತಲ್‌ಗೆ ಮದುವೆಯಾಗಿ ಒಂದು ಮಗು ಇತ್ತು. ಆದರೆ ಗಂಡನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ಬಗ್ಗೆ ತಿಳಿದಿದ್ದರೂ ಕೂಡ ಶೀತಲ್‌ಗೆ ಮದುವೆಯಾಗುವಂತೆ ಸುನಿಲ್ ಕೇಳಿಕೊಂಡಿದ್ದ. ಅದಲ್ಲದೇ ಸುನಿಲ್‌ಗೂ ಕೂಡ ಮದುವೆಯಾಗಿ ಎರಡು ಮಕ್ಕಳಿದ್ದರು ಎಂದು ತಿಳಿಸಿದ್ದಾರೆ.
