ಉದಯವಾಹಿನಿ ,ಬೆಂಗಳೂರು : ದಳಪತಿಗಳ `ಕೈ’ ಸೆಳೆತದ ನೋವಿಗೆ ಮೈತ್ರಿ ಮದ್ದು ಅರೆದು ಜಿಗಿಯುವ ಕಾಯಿಲೆ ವಾಸಿ ಮಾಡಲು ಹೊರಟಂತಿದೆ. ತಂದೆ, ಮಗ ಇಬ್ಬರೂ ಒಟ್ಟಿಗೆ ಜೆಡಿಎಸ್ ಭವಿಷ್ಯದ ಬಗ್ಗೆ ಗಟ್ಟಿ ಮಾತುಗಳನ್ನಾಡಿ ಹುರುಪು ತುಂಬುವ ಪ್ರಯತ್ನ ಮಾಡಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರಂತೂ ಆರೋಗ್ಯದ ಭಾವಾನಾತ್ಮಕ ಚರ್ಚೆಗಳಿಗೂ ಉತ್ತರ ಕೊಟ್ಟು, ನಾನು ಆರೋಗ್ಯ.. ನನ್ನ ಪಕ್ಷವೂ ಆರೋಗ್ಯ ಎಂಬ ಸಂದೇಶ ರವಾನಿಸಿದ್ದಾರೆ. ಜೆಡಿಎಸ್ ಪಕ್ಷ ಮುಗಿಸುವ ಮಹಾನುಭ ಹುಟ್ಟಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮದೇ ಶೈಲಿಯಲ್ಲಿ ವಿರೋಧಿಗಳನ್ನ ಕುಟುಕಿದ್ದಾರೆ. ಹಾಗಾದ್ರೆ ಜೆಡಿಎಸ್‌ಗಿರುವ ಆತಂಕವೇನು..? ಜೆಡಿಎಸ್ ಮುಗಿಸುವ ಚದುರಂಗದಾಟ ನಡೆಯುತ್ತಿದ್ಯಾ..? ಈ ಚರ್ಚೆಗಳಿಗೆ ಅಪ್ಪ-ಮಕ್ಕಳ ಮಾತೇ ಸಾಕ್ಷಿ ಎಂಬಂತಿರುವುದು ಸ್ಪಷ್ಟ.
ಜೆಡಿಎಸ್ ಮುಗಿದೇ ಹೋಯ್ತು.. ಎಂಬ ರಾಜಕೀಯ ಲೆಕ್ಕಚಾರ, ವಿರೋಧಿಗಳ ಬೆರಯುತ್ತಿದ್ದ ಹಣೆಬರಹ ನಿನ್ನೆ ಮೊನ್ನೆಯದ್ದಲ್ಲ. ಎರಡು ದಶಕಗಳಿಂದಲೂ ಜೆಡಿಎಸ್ ಮುಗಿದೇ ಹೋಯ್ತು ಎನ್ನುವಾಗಲೇ ಫಿನೀಕ್ಸ್ನಂತೆ ಮೇಲೆದ್ದು ಬಂದಿದ್ದು ಇದೆ. ಅದು 2008ರ ಕರ್ನಾಟಕ ವಿಧಾನಸಭೆ ಚುನಾವಣೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಚನ ಭ್ರಷ್ಟ ಬ್ರಹ್ಮಾಸ್ತ್ರ ಪ್ರಯೋಗಿಸಿ ಗೆದ್ದು ಬೀಗಿದವರು ಬಿ.ಎಸ್. ಯಡಿಯೂರಪ್ಪ. 2004ರ ಚುನಾವಣೆಯಲ್ಲಿ 58 ಸ್ಥಾನಗಳನ್ನ ಗೆದ್ದು ಅಬ್ಬರಿಸಿ ಮೊದಲು ಕಾಂಗ್ರೆಸ್, ನಂತರ ಬಿಜೆಪಿ ಜೊತೆ ಸಮ್ಮಿಶ್ರ ಸರ್ಕಾರ ರಚಿಸಿದ್ದ ಜೆಡಿಎಸ್ ವಚನ ಭ್ರಷ್ಟ ಅಸ್ತ್ರಕ್ಕೆ ಸಿಲುಕಿ ನರಳಿತ್ತು ಆಗ.
